3 ಲಕ್ಷ ಮರ ಕಡಿಯಲು ಮುಂದಾಗಿರುವ ಕ್ರಮಕ್ಕೆ ಆಕ್ಷೇಪ

| Published : Jan 17 2025, 12:45 AM IST

3 ಲಕ್ಷ ಮರ ಕಡಿಯಲು ಮುಂದಾಗಿರುವ ಕ್ರಮಕ್ಕೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಮಾಳ ಜಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಲು ಹೊರಟಿರುವ ಜಿಲ್ಲಾಡಳಿತ ಈ ಎರಡೂ ತಾಲೂಕುಗಳಿಂದ 3 ಲಕ್ಷ ಮರಗಳನ್ನು ಕಡಿಯಲು ಮುಂದಾಗಿರುವ ಕ್ರಮಕ್ಕೆ ಪರಿಸರ ಚಿಂತಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಮಾಳ ಜಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಲು ಹೊರಟಿರುವ ಜಿಲ್ಲಾಡಳಿತ ಈ ಎರಡೂ ತಾಲೂಕುಗಳಿಂದ 3 ಲಕ್ಷ ಮರಗಳನ್ನು ಕಡಿಯಲು ಮುಂದಾಗಿರುವ ಕ್ರಮಕ್ಕೆ ಪರಿಸರ ಚಿಂತಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಶಿವಸಂದ್ರ ಗ್ರಾಮದ ಸರ್ವೆ ನಂ-45ರಲ್ಲಿ 135 ಎಕರೆ, ಸಿ.ಎಸ್ ಪುರ ಹೋಬಳಿ ಬೋರಪ್ಪನಹಳ್ಳಿ ಸರ್ವೆ ನಂ-38ರಲ್ಲಿ 12.32 ಎಕರೆ, ನಾರನಹಳ್ಳಿ ಗ್ರಾಮದ ಸರ್ವೆ ನಂ 26 ರಲ್ಲಿ 18.20 ಎಕರೆ, ಹಾಗಲವಾಡಿ ಹೋಬಳಿ ಮಾದಲಾಪುರ ಗ್ರಾಮದ ಸರ್ವೆ ನಂ-25 ರಲ್ಲಿ 30 ಎಕರೆ ಮತ್ತು ಚಿಕ್ಕನಾಯನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ಗ್ರಾಮದ ಸರ್ವೆ ನಂ-31ರಲ್ಲಿ 47 ಎಕರೆ ಒಟ್ಟು 242.52 ಗೋಮಾಳ ಪ್ರದೇಶವನ್ನು ಸೋಲಾರ್ ವಿದ್ಯುತ್ ಘಟಕ ನಿರ್ಮಾಣ ಮಾಡಲು ಇಂಧನ ಇಲಾಖೆಗೆ ನೀಡಿ ಈ ಪ್ರದೇಶದಲ್ಲಿರುವ ಅಪರೂಪದ ಮರಗಳನ್ನು ಕಡಿಯಲು ಟೆಂಡರ್ ಸಹ ಕರೆದಿರುವುದಕ್ಕೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಖಂಡಿಸಿದ್ದಾರೆ.

ಬಾಕ್ಸ್‌...

ಅಪರೂಪದ ಮರಗಳು ವನ್ಯಪ್ರಾಣಿಗಳುಈ ಎಲ್ಲಾ ಗೋಮಾಳ ಪ್ರದೇಶಗಳು ಮರದ ಹುಲ್ಲುಗಾವಲು, ಕುರುಚಲು ಕಾಡು ಹಾಗೂ ಹುಲ್ಲುಗಾವಲಿನಿಂದ ಕೂಡಿದ್ದು ಸ್ಥಳಿಯ ಮರಗಳಾದ ಕಮರ, ಶ್ರೀಗಂಧ, ಅಳಲೆ, ಜಾಲಾರಿ, ಮರಡಿ, ಹೊನ್ನೆ, ಬಾಗೆ, ಕಾಡುಬಿಕ್ಕೆ, ಕಗ್ಗಲಿ, ದಿಂಡಿಗ, ಉದಯ, ಬಿಲ್ವಾರ, ತೇಗ, ಬೇವು, ಹೊಂಗೆ, ಅಕೇಶಿಯ, ಅರಳಿ, ಆಲ,ಶತಾವರಿ, ಕಾಡುಗೇರು, ತಾರೆ ಇಂತಹ ನೂರಕ್ಕೂ ಹೆಚ್ಚು ಪ್ರಭೇದದ ಔಷಧೀಯ ಮಹತ್ವದ ಮರಗಳು, ನಾನಾ ವಿಧದ ಹುಲ್ಲು ಪ್ರಬೇಧಗಳು ಮತ್ತು ಮೂಲಿಕೆಗಳಿವೆ. ಶಿವಸಂದ್ರ ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ನಾಲ್ಕು ಕೊಂಬಿನ ಆಂಟಿಲೋಪ್, ಮುಳ್ಳಂದಿ, ಚಿಪ್ಪಂದಿ, ಕಡವೆ, ಚಿರತೆ, ಕರಡಿ, ಕಾಡುಬೆಕ್ಕು, ನರಿಯಂತಹ ಕಾಡುಪ್ರಾಣಿಗಳಿವೆ. ಇಲ್ಲಿನ ಕಾಡು ಪ್ರಾಣಿಪಕ್ಷಿಗಳಿಗೆ ಆಹಾರ, ಆಶ್ರಯವನ್ನು ನೀಡುತ್ತವೆ ಅಲ್ಲದೆ ನೂರಾರು ಕೀಟಗಳು, ಪತಂಗಳು, ಚಿಟ್ಟೆಗಳ ಆಹಾರ ಸಸ್ಯಗಳಾಗಿವೆ. ಇಂತಹ ಶ್ರೀಮಂತ ಜೀವ ವೈವಿಧ್ಯವಿರುವ ಈ ಪ್ರದೇಶ ಗೋಮಾಳವಲ್ಲ ಶ್ರೀಮಂತ ಕಾಡು. ಇಲ್ಲಿನ ಗ್ರಾಮ ಪಂಚಾಯಿತಿ, ಪಂಚಾಯತ್ ರಾಜ್ ಹಾಗೂ ಜೀವವೈವಿಧ್ಯ ಕಾಯ್ದೆ 2002 ಮತ್ತು 2004 ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು , ತಹಸೀಲ್ದಾರ್ ರವರು ಕ್ಷೇತ್ರ ಭೇಟಿ ಮಾಡಿ ಇಲ್ಲಿನ ಜೀವ ವೈವಿಧ್ಯವನ್ನು ಪರಿಶೀಲಿಸಲಿ. ಬರಗಾಲದಲ್ಲಿ ಮರಡಿ ಮರಗಳ ಬೀಜಗಳು ಬಡವರ ಬಾದಾಮಿಯಾಗಿದ್ದವು, ಬ್ರಿಟಿಷ್‌ ಹಾಗೂ ಫ್ರೆಂಚರ ಕಾಲದಲ್ಲಿ ಮಂಚಲದೊರೆ, ಬುಕ್ಕಾಪಟ್ಟಣ ಕಾಡಿನಲ್ಲಿ ಮಾತ್ರ ಬೆಳೆಯುವ ದೇಶದ ಅತ್ಯಂತ ಗಟ್ಟಿ ಮರಗಳಾದ ಕಮರ ಮರಗಳನ್ನು ಹಡಗುಗಳ ನಿರ್ಮಾಣಕ್ಕೆ, ರೈಲ್ವೆ ಹಳಿ ನಿರ್ಮಾಣಕ್ಕೆ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಚಿನ್ನ ಸಂಸ್ಕರಣೆ ಮಾಡಲು ಇದ್ದಿಲು ತಯಾರಿಕೆಗೆ ಬಳಸುತ್ತಿದ್ದರು. ಈ ಎರಡು ತಾಲೂಕುಗಳಲ್ಲಿ ದಶಕಗಳ ಕಾಲ ನಿರಂತರ ಕಬ್ಬಿಣ, ಮ್ಯಾಂಗನೀಸ್, ಸುಣ್ಣದ ಕಲ್ಲಿನ ಗಣಿಗಾರಿಕೆ ನಡೆದು ಸಂಪೂರ್ಣ ಶೋಷಣೆಗೆ ಒಳಗಾದ ಪ್ರದೇಶದಲ್ಲಿ ಅಭಿವೃದ್ಧಿಯ ಹೆಸರಲ್ಲಿ ಖಾಸಗಿ ಕಂಪನಿಯ ಕೈಗೆ ಇಲ್ಲಿನ ಜೀವ ವೈವಿಧ್ಯ ನೀಡಿ ಜಿಲ್ಲೆಯ ಜೀವ ಜಾಲ ಹಾಳುಮಾಡುವುದನ್ನು ನಿಸರ್ಗ ಸಂಸ್ಥೆ ಖಂಡಿಸಿದೆ. ಗುಬ್ಬಿ ತಾಲೂಕಿನ ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿಯೊಂದು ಸತ್ತಿರುವುದನ್ನು ಸ್ಮರಿಸಬಹುದು. ಮರ ಕಡಿಯಲು ಉದ್ಧೇಶಿಸಿರುವ ಪ್ರದೇಶದಲ್ಲಿ 1998-99 ರ ಸಾಲಿನಲ್ಲಿ ಜಪಾನ್ ಸಾಗರೋತ್ತರ ಅಭಿವೃದ್ಧಿ ಹಣದಿಂದ ಪ್ಲಾಂಟೇಶನ್ ಮಾಡಿರುವ ಈ ಪ್ರದೇಶದಲ್ಲಿ ಗಿಡ ಮರಗಳ ದಟ್ಟಣೆ ಮತ್ತು ಸಾಂದ್ರತೆ ಹೆಚ್ಚಿದ್ದು ಕಾಡು ದಟ್ಟವಾಗಿದೆ ಎಂದು ಗುಂಡಪ್ಪ ತಿಳಿಸಿದ್ದಾರೆ. ಈ ಪ್ರದೇಶದ ಪರಿಸರ ಪ್ರಭಾವದ ಮೌಲ್ಯಮಾಪನ ಅರಣ್ಯ ಇಲಾಖೆಯಿಂದ ಮಾಡಿಸದೆ ಇಲ್ಲಿನ ಬಡ ರೈತಾಪಿ ಜನರ ಪಶುಸಂಗೋಪನೆಯ ಮೇಲೆ ಬರೆ ಎಳೆಯಲು ಹೊರಟ ಜಿಲ್ಲಾಡಳಿತದ ಮುಂದಾಲೋಚನೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತಿದೆ. ಜಿಲ್ಲೆಯಲ್ಲಿ ಹಸಿರನ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಪಾತಾಳ ಸೇರಿದೆ. ಕಳೆದ ಬೇಸಿಗೆಯಲ್ಲಿ 42 ಡಿಗ್ರಿ ಉಷ್ಣತೆ ದಾಖಲಾಗಿರುವುದನ್ನು ಜಿಲ್ಲಾಧಿಕಾರಿಗಳು ಮರೆತಿದ್ದಾರೆ. ಗಣಿಬಾಧಿತ ಪ್ರದೇಶ ಅಭಿವೃದ್ಧಿ ಪಡಿಸಲು 200 ಕೋಟಿಗಿಂತ ಸಿ.ಎಸ್,ಆರ್ ಹಣ ಜಿಲ್ಲಾಧಿಕಾರಿಗಳಲ್ಲಿ ಕೊಳೆಯುತ್ತಿದೆ. ಯಾವುದೇ ಶಾಲೆ ಕಾಲೇಜು,ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿಲ್ಲ, ಮರ ಕಡಿಸುವುದನ್ನು ನಿಲ್ಲಿಸಿ ಗಣಿಬಾಧಿತ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಉತ್ಸುಕತೆ ತೋರಬೇಕೆಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.