ಕಳೆದ 30 ವರ್ಷಗಳಿಂದ ಈರಣ್ಣ ತುಪ್ಪದ ಅವರು ಶ್ರೀಮಠದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ 10ಕ್ಕೂ ಹೆಚ್ಚು ಗಂಭೀರ ಆರೋಪಗಳಿವೆ. ತಕ್ಷಣ ಅವರನ್ನು ಅಮಾನತು ಮಾಡಿ, ವಿಚಾರಣೆ ನಡೆಸಬೇಕು ಎಂದು ಶ್ರೀಮಠದ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ನಾರಾಯಣ ವೈದ್ಯ ಒತ್ತಾಯಿಸಿದರು.

ಹುಬ್ಬಳ್ಳಿ:

ಚಿಕ್ಕಮಗಳೂರು ಜಿಲ್ಲೆಯ ತರಿಕೇರಿಯಲ್ಲಿರುವ ಸಿದ್ಧಾರೂಢಮಠದ ಆಸ್ತಿ ರಕ್ಷಣೆ, ತಪ್ಪಾಗಿರುವ ಮಾಸಪತ್ರಿಕೆಯ ತಲೆಬರಹ, ಆರೂಢ ಆರತಿಗೆ ಆಕ್ಷೇಪ, ಮಠದ ವ್ಯವಸ್ಥಾಪಕರ ಅಮಾನತುಗೊಳಿಸುವುದು, ರೈಲು ನಿಲ್ದಾಣದಲ್ಲಿ ಸಿದ್ಧಾರೂಢರ ಮೂರ್ತಿ ಸ್ಥಾಪಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಂಗಳವಾರ ಇಲ್ಲಿನ ಸಿದ್ಧಾರೂಢಮಠದಲ್ಲಿ ನಡೆದ ಆಜೀವ ಪೋಷಕರ, ಆಶ್ರಯದಾತರ ಮತ್ತು ಸದಸ್ಯರ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.

ಸಭೆಯಲ್ಲಿ ಸಿದ್ಧಾರೂಢಮಠ ಟ್ರಸ್ಟ್‌ ಕಮಿಟಿಯ 17 ಮಂದಿ ಟ್ರಸ್ಟಿಗಳಲ್ಲಿ ಕೇವಲ 6 ಮಂದಿ ಪಾಲ್ಗೊಂಡಿದ್ದಕ್ಕೆ ಭಕ್ತರು ಆಕ್ಷೇಪಿಸಿದರು.

ಈ ವೇಳೆ ಶ್ರೀಮಠದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಅದ್ವೈತ ಮಠದಲ್ಲಿ ವೈದಿಕ ಪರಂಪರೆಯ ಆರೂಢ ಆರತಿ ಅನುಷ್ಠಾನಗೊಳಿಸಿದ್ದು ಸರಿಯಲ್ಲ. ಅಮಾವಾಸ್ಯೆ ದಿನ ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬರುತ್ತಾರೆ. ಆ ದಿನದ ಬದಲು ಬೇರೆ ದಿನ ಆರೂಢ ಆರತಿ ಇಟ್ಟುಕೊಂಡು, ಭಕ್ತರ ಸಂಖ್ಯೆ ತೋರಿಸಿ ಎಂದು ಸವಾಲು ಹಾಕಿದರು. ಮಠದ ಅಡಿಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ ಎಂದು ಲಿಖಿತವಾಗಿ ವಿನಂತಿಸಿಕೊಂಡರೂ ಆಡಳಿತ ಮಂಡಳಿಯಿಂದ ಸಾಧ್ಯವಾಗುತ್ತಿಲ್ಲ. ಆದರೆ, ಭಕ್ತರ ಯಾವ ಕೋರಿಕೆಯೂ ಇಲ್ಲದೆ ಆರೂಢ ಆರತಿಗೆ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಿದರು.

ತತ್ತ್ವಾಮೃತಕ್ಕೆ ಆಕ್ಷೇಪ:

ಶ್ರೀಮಠದಿಂದ ಪ್ರಕಟವಾಗುವ ಮಾಸ ಪತ್ರಿಕೆಯ ತಲೆಬರಹ (ತತ್ತ್ವಾಮೃತ)ವೇ ತಪ್ಪಾಗಿದೆ. ಕನ್ನಡ ಪದವನ್ನು ತಪ್ಪಾಗಿ ಬಳಸಿ, ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತದೆ. ಅದನ್ನು ಸರಿಪಡಿಸಬೇಕು ಎಂದು ಭಕ್ತ ಗುರುಶಾಂತಪ್ಪ ಕಾರಿ ಹೇಳಿದರು.

ರಾಜೀನಾಮೆ ನೀಡುವೆ:

ಅವರ ಮಾತಿಗೆ ಕಮಿಟಿ ಸದಸ್ಯ, ಮಾಸಪತ್ರಿಕೆ ಉಪಸಮಿತಿಯ ಕಾರ್ಯಾಧ್ಯಕ್ಷ ಶಾಮಾನಂದ ಪೂಜೇರಿ, ಕನ್ನಡ ಬಲ್ಲ ಅನೇಕರನ್ನು ಕೇಳಿ ಆ ಪದ ಇಡಲಾಗಿದೆ. ತತ್ತ್ವಾಮೃತ ಪದ ಸರಿಯಾಗಿದೆ. ತಪ್ಪಾಗಿದೆ ಎಂದಾದರೆ, ಉಪಸಮಿತಿಗೆ ರಾಜೀನಾಮೆ ನೀಡುತ್ತೇನೆ ಎಂದರು. ಅದರಿಂದ ಕೋಪಗೊಂಡ ಗುರುಶಾಂತಪ್ಪ, ಆ ಪದ ಸರಿಯೆಂದಾದರೆ ವಿದ್ವಾಂಸರನ್ನು ಕರೆಸಿ ನನಗೆ ಛೀಮಾರಿ ಹಾಕಿಸಿ. ತಪ್ಪನ್ನು ಸರಿ ಎಂದು ವಾದಿಸುವುದು ಸರಿಯಲ್ಲ ಎಂದರು.

ಮಠದ ಆವರಣದಲ್ಲಿ ಗುಟಕಾ, ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬೇಕು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಸರಿಪಡಿಸಬೇಕು, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಇರುವ ವಿವೇಕಾನಂದ ಮೂರ್ತಿ ತೆರವಿಗೊಳಿಸಿ ಅಲ್ಲಿ ಶ್ರೀಸಿದ್ಧಾರೂಢರ ಮೂರ್ತಿ ಸ್ಥಾಪನೆಗೆ ನಿರ್ಣಯ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದರು.

ಭಕ್ತರಾದ ಸಂಜು ಬುಗಡಿ, ಸಂಜೀವ ದುಮುಕನಾಳ, ಗುರುಸಿದ್ದಪ್ಪ ಅಂಗಡಿ, ಗಂಗಾಧರ ದೊಡ್ಡವಾಡ ಮಾತನಾಡಿದರು. ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷ ಡಿ.ಆರ್‌. ಪಾಟೀಲ, ಟ್ರಸ್ಟಿಗಳಾದ ಬಾಳಕೃಷ್ಣ ಮಗಜಿಕೊಂಡಿ, ಗೋವಿಂದ ಮಣ್ಣೂರು, ಗೀತಾ ಕಲಬುರ್ಗಿ ಇದ್ದರು.

ವ್ಯವಸ್ಥಾಪಕರ ಅಮಾನತಿಗೆ ಆಗ್ರಹ

ಕಳೆದ 30 ವರ್ಷಗಳಿಂದ ಈರಣ್ಣ ತುಪ್ಪದ ಅವರು ಶ್ರೀಮಠದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ 10ಕ್ಕೂ ಹೆಚ್ಚು ಗಂಭೀರ ಆರೋಪಗಳಿವೆ. ತಕ್ಷಣ ಅವರನ್ನು ಅಮಾನತು ಮಾಡಿ, ವಿಚಾರಣೆ ನಡೆಸಬೇಕು ಎಂದು ಶ್ರೀಮಠದ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ನಾರಾಯಣ ವೈದ್ಯ ಒತ್ತಾಯಿಸಿದರು. ಜತೆಗೆ ತರಿಕೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಮಠವು ಇಬ್ಭಾಗವಾಗುತ್ತಿದೆ. ಅಲ್ಲಿಗೆ ಭೇಟಿ ನೀಡಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಕುರಿತು ಮಠದ ಆಡಳಿತಾಧಿಕಾರಿ ಮತ್ತು ಜಿಲ್ಲಾಧಿಕಾರಿಗೂ ಅವರ ವಿರುದ್ಧ ದೂರು ನೀಡಲಾಗಿದೆ. ಆದರೂ ಅವರನ್ನೇ ಮುಂದುವರಿಸಿರುವುದೇಕೆ? ಕಮಿಟಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉಳಿದ ಭಕ್ತರು ಸಹ ಸಹಮತ ವ್ಯಕ್ತಪಡಿಸಿ, ಈ ಕೂಡಲೇ ಅವರನ್ನು ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಟ್ರಸ್ಟ್ ಕಮಿಟಿ ಚೇರ್‌ಮೆನ್‌ ಚನ್ನವೀರ ಮುಂಗುರವಾಡಿ, ಈಗಾಗಲೇ ಆಡಳಿತಾಧಿಕಾರಿ ಅವರಿಂದ ವಿಚಾರಣೆಗೆ ಬಂದಿದೆ. ಸೋಮವಾರ ವ್ಯವಸ್ಥಾಪಕರಿಂದ ಹೇಳಿಕೆ ಪಡೆದು ಬಳಿಕ ಎರಡು ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.