ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬೃಹತ್ ಬಂದರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಕಾರವಾರ: ಜಿಲ್ಲೆಯ ಮೀನುಗಾರರ ಜೀವನಾಧಾರವಾಗಿರುವ ಕಡಲ ತೀರಗಳನ್ನು ಖಾಸಗಿ ಕಂಪನಿಗಳ ಹಿತಾಸಕ್ತಿಗಾಗಿ ನೀಡುವುದಕ್ಕೆ ವಿರೋಧವಿದೆ. ನಾಡಿನ ನೆಲ, ಜಲದ ರಕ್ಷಣೆಗೆ ನಮ್ಮ ಸಂಘಟನೆ ಸದಾ ಸಿದ್ಧವಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಕೆ.ಎನ್. ಜಗದೀಶ್ ಹೇಳಿದರು.ಭಾನುವಾರ ಕಾರವಾರಕ್ಕೆ ಭೇಟಿ ನೀಡಿದ ವೇಳೆ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಮೀನುಗಾರರ ಹಿತರಕ್ಷಣೆಗೆ ಸಂಘಟನೆ ಬದ್ಧವಾಗಿದೆ. ಮೀನುಗಾರಿಕೆ ಅವರ ಬದುಕು ಮತ್ತು ಜೀವನೋಪಾಯವಾಗಿದೆ. ಅದನ್ನೇ ಕಸಿದುಕೊಂಡರೆ ಮೀನುಗಾರರು ಬೀದಿಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬೃಹತ್ ಬಂದರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕಾರವಾರದಲ್ಲಿಯೂ ಹಲವು ಹೋರಾಟಗಳು ನಡೆದಿದ್ದರೂ ಸಾಗರಮಾಲಾ ಯೋಜನೆಯಡಿ ಬಂದರು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಮೀನುಗಾರರಿಂದ ಕಡಲ ತೀರವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ಕಡಲ ತೀರಗಳನ್ನೆಲ್ಲ ಖಾಸಗಿ ಕಂಪನಿಗಳಿಗೆ ನೀಡಿದರೆ ಮೀನುಗಾರರು ಎಲ್ಲಿಗೆ ಹೋಗಬೇಕು? ಸರ್ಕಾರ ಬಡ ಮೀನುಗಾರರ ಬದುಕಿನ ಬಗ್ಗೆಯೂ ಯೋಚಿಸಬೇಕು.
ಈ ವಿಚಾರವಾಗಿ ಸಂಘಟನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅವರೊಂದಿಗೆ ಚರ್ಚಿಸಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದರು.ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಫಿಶ್ ಮಿಲ್ ಸ್ಥಾಪನೆಗೆ ಮುಂದಾಗಿರುವ ವಿಷಯವೂ ಗಮನಕ್ಕೆ ಬಂದಿದೆ. ಫಿಶ್ ಮಿಲ್ ಸ್ಥಾಪನೆಗೆ ಸಂಘಟನೆಯ ವಿರೋಧವಿಲ್ಲ. ಆದರೆ ಜನವಸತಿ ಪ್ರದೇಶದಲ್ಲಿ ಸ್ಥಾಪಿಸುವುದಕ್ಕೆ ವಿರೋಧವಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಳ್ಳುವ ಆತಂಕವಿದೆ. ಸ್ಥಳೀಯರಿಗೆ ತೊಂದರೆಯಾಗುವ ಹಿನ್ನೆಲೆ ಫಿಶ್ ಮಿಲ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ಸಂಘಟನೆಯಿಂದ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.