ವಸ್ತುನಿಷ್ಠ ವರದಿಗಳಿಂದ ಪತ್ರಿಕೆಗಳಿಗೆ ಮಹತ್ವ: ಸ್ವಾಮೀಜಿ

| Published : Jul 29 2025, 01:00 AM IST

ವಸ್ತುನಿಷ್ಠ ವರದಿಗಳಿಂದ ಪತ್ರಿಕೆಗಳಿಗೆ ಮಹತ್ವ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಿನಪತ್ರಿಕೆಗಳಲ್ಲಿ ಬರುವಂತಹ ಸುದ್ದಿಗಳ ವಿಚಾರಗಳು ದಾಖಲೆಗಳಾಗಿದ್ದು, ಯಾವುದೇ ಘಟನೆಗಳಿಗೆ ಸಂಬಂಧಪಟ್ಟಂತೆ ಸಾಕ್ಷೀಕರಿಸಲು ಪತ್ರಿಕಾ ವರದಿಗಳು ಬಹುಮುಖ್ಯ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿವೆ. ಇದರಿಂದ ಮುದ್ರಣ ಮಾಧ್ಯಮಗಳು ಬಲವಾಗಿ ನೆಲೆಯಾಗಿರಲು ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ನುಡಿದಿದ್ದಾರೆ.

- ಸಂತೆಬೆನ್ನೂರಲ್ಲಿ ಪತ್ರಿಕಾ ದಿನಾಚರಣೆ- ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದಿನಪತ್ರಿಕೆಗಳಲ್ಲಿ ಬರುವಂತಹ ಸುದ್ದಿಗಳ ವಿಚಾರಗಳು ದಾಖಲೆಗಳಾಗಿದ್ದು, ಯಾವುದೇ ಘಟನೆಗಳಿಗೆ ಸಂಬಂಧಪಟ್ಟಂತೆ ಸಾಕ್ಷೀಕರಿಸಲು ಪತ್ರಿಕಾ ವರದಿಗಳು ಬಹುಮುಖ್ಯ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿವೆ. ಇದರಿಂದ ಮುದ್ರಣ ಮಾಧ್ಯಮಗಳು ಬಲವಾಗಿ ನೆಲೆಯಾಗಿರಲು ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಕೆಳದಿರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದ ಜವಾಬ್ದಾರಿ ಸ್ಥಾನದಲ್ಲಿರುವ ಪತ್ರಿಕೋದ್ಯಮದಲ್ಲಿ ಇರುವಂತಹವರು ವಸ್ತುನಿಷ್ಠವಾದಂತಹ ವರದಿಗಳನ್ನು ಮಾಡುತ್ತಿದ್ದಾಗ ಪತ್ರಿಕೆಗಳ ಮಹತ್ವ ಹೆಚ್ಚಾಗಿರುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ತಾಲೂಕಿನ ಪತ್ರಕರ್ತರು ಒಗ್ಗಟ್ಟಿನಿಂದ ಇರಬೇಕಾಗಿದೆ. ಸತ್ಯನಿಷ್ಠವಾದ ವರದಿಗಳನ್ನು ಮಾಡುತ್ತಾ ಮಾಧ್ಯಮಗಳಿಗೆ ಶಕ್ತಿ ತುಂಬಬೇಕು. ತಾಲೂಕಿನ ಕ್ರಿಯಾಶೀಲ ಪತ್ರಕರ್ತರನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಕ್ಷೇತ್ರದಲ್ಲಿನ 42 ಕೆರೆಗಳನ್ನು ತುಂಬಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದೆ. ಒಟ್ಟು 69 ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಿದ್ದೇನೆ. ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಗಳಾಗದಂತೆ 33 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಈಗಾಗಲೇ ಒತ್ತು ನೀಡಲಾಗಿದೆ. ಶಿಕ್ಷಣ ಕ್ಷೇತ್ರ ಪ್ರಗತಿಗೆ ಪೂರಕವಾಗಿ ₹15 ಕೋಟಿಯವನ್ನು ನೀಡುತ್ತಿರುವುದಾಗಿ ತಿಳಿಸಿದರು.

ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಮೊಬೈಲ್‌ಗಳು ಚಲಾವಣೆಗೆ ಬರುವ ಮೊದಲು ಪತ್ರಿಕೆಗಳು ಜನಪ್ರಿಯತೆ ಪಡೆದಿದ್ದವು. ಅಂಗೈನಲ್ಲಿ ಪ್ರಪಂಚ ನೋಡುವ ಮೊಬೈಲ್‌ಗಳು ಬಂದ ಮೇಲೆಯೂ ಮುದ್ರಣ ಮಾಧ್ಯಮ ವರ್ಚಸ್ಸು ಕುಂದದೇ ಮುನ್ನಡೆಯುತ್ತಿವೆ. ದಿನಪತ್ರಿಕೆಗಳನ್ನು ಒದುವ ಹವ್ಯಾಸಗಳನ್ನು ವಿದ್ಯಾರ್ಥಿಗಳಿದ್ದಾಗಲೇ ಬೆಳೆಸಿಕೊಳ್ಳಬೇಕು ಎಂದರು.

ಪತ್ರಿಕೋದ್ಯಮ ಪದವೀಧರ, ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ.ನಾಗರಾಜ್ ಮಾತನಾಡಿ, ಕಾಸಿಗಾಗಿ ಸುದ್ದಿ ಮಾಡದೇ ಮೌಲ್ಯಗಳಿಗಾಗಿ ಸೇವೆ ಮಾಡುವವರೇ ನಿಜವಾದ ಪತ್ರಕರ್ತರು ಎಂದರು.

ತಾಲೂಕು ಪತ್ರಕರ್ತರ ಸಂಘದಿಂದ ಕೆಳದಿರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿಯನ್ನು ಪತ್ರಕರ್ತ ವೀರೇಶ್ ಪ್ರಸಾದ್ ಅವರಿಗೆ ನೀಡಿ ಗೌರವಿಸಲಾಯಿತು. ಪತ್ರಿಕಾ ವಿತರಕರಾದ ಎನ್.ನಿತಿನ್, ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಾದ ಕೆ.ಎಸ್. ವಿನಯ ಪ್ರಸಾದ್, ಸಂಜನಾ ಎಸ್.ಪವಾರ್, ನಿಶಾ, ಗೌಸಿಯಾ ತಜನಮ್ ಈ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಮಾರಂಭದಲ್ಲಿ ದೈವ ಸಂಸ್ಕೃತಿ ಪ್ರತಿಷ್ಠಾನದ ಬೂದಿಸ್ವಾಮಿ, ಸತೀಶ್ ಪವಾರ್, ಬಾ.ರಾ,ಮಹೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಫಕೃದ್ದೀನ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತ್ಯಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ಶಾಲೆ ಪ್ರಾಚಾರ್ಯರಾದ ಶಾರದಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಸ್ವಾಮಿಗೌಡ, ಪತ್ರಕರ್ತರಾದ ಎಂ.ಅಣ್ಣೋಜಿರಾವ್, ಎಂ.ಪ್ರಸನ್ನ, ಎಸ್.ಜಿ.ಕಿರಣ್, ಸತೀಶ್, ದೇವರಾಜ್ ಉಪಸ್ಥಿತರಿದ್ದರು.

- - -

-28ಕೆಸಿಎನ್‌ಜಿ1.ಜೆಪಿಜಿ:

ಸಂತೆಬೆನ್ನೂರು ಕೆಪಿಎಸ್‌ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಕಾರ್ಯಕ್ರಮವನ್ನು ಶಾಸಕ ಬಸವರಾಜ ವಿ. ಶಿವಗಂಗಾ ಉದ್ಘಾಟಿಸಿರು. ಪಾಂಡೋಮಟ್ಟಿ ಶ್ರೀಗಳು, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮತ್ತಿತರರು ಇದ್ದರು. -28ಕೆಸಿಎನ್ಜಿ2: ಪತ್ರಕರ್ತ ವೀರೇಶ್ ಪ್ರಸಾದ್ ಅವರಿಗೆ ಕೆಳದಿ ರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.