ವಸ್ತುನಿಷ್ಠ ವರದಿಗೆ ಇಂದಿಗೂ ಎಂದೆಂದಿಗೂ ಜನಪ್ರಿಯತೆಯಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕೈಗೊಳ್ಳುವ ಕಾರ್ಯಗಳ ಕುರಿತು ಜನರಿಗೆ ತಿಳಿಸುವ 4ನೇ ಅಂಗ ಮಾಧ್ಯಮದ ಕಾರ್ಯ. ವಸ್ತುನಿಷ್ಠ ವರದಿಗೆ ಇಂದಿಗೂ ಎಂದೆಂದಿಗೂ ಜನಪ್ರಿಯತೆಯಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಭಾನುವಾರ ಆರ್.ಜೆ. ಮೀಡಿಯಾ ವತಿಯಿಂದ ವಿಪ ಸದಸ್ಯರಾಗಿ 45 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸನ್ಮಾನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಕಂಪನಿಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಹುಟ್ಟಿಕೊಂಡಿತು. ಅವರೊಂದಿಗೆ ಅದು ಅಂತ್ಯವಾಯಿತು. ಇಂದು ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಋಣ ಎಂಬುದು ದೊಡ್ಡದು. ಜೀವನದಲ್ಲಿ ಮೌಲ್ಯಗಳನ್ನು ಕಲಿಸಿದ ಗುರು ನನ್ನ ತಂದೆ. ಜನ್ಮನೀಡಿದ ತಂದೆ- ತಾಯಿ, ಹುಟ್ಟಿದ ಊರು, ಕಲಿಸಿದ ಶಾಲೆಯ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಈ ರಾಜಕೀಯ ಕ್ಷೇತ್ರ ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡೆ. ಶಿಕ್ಷಕರಿಗಾಗಿ ನಡೆದ ಹೋರಾಟ, ಚುನಾವಣಾ ಸಂದರ್ಭದಲ್ಲಿ ನಡೆದ ಶಿಕ್ಷಕರ ಸಭೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರು.ಶಿಕ್ಷಕರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಕಳೆದುಕೊಳ್ಳಬೇಡ ಎಂದು ಹಿತೈಷಿಯೊಬ್ಬರು ಹೇಳಿದ್ದರು. ಅದನ್ನು ಪ್ರತಿನಿತ್ಯವೂ ನೆನಪಿಸಿಳ್ಳುತ್ತೇನೆ. ಇಷ್ಟು ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೇ ರಾಜಕಾರಣ ಮಾಡಿದ ತೃಪ್ತಿ ನನಗಿದೆ. ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮತ್ತು ನನ್ನ ಸಂಬಂಧ ಇಂದಿಗೂ ಕುಟುಂಬದ ರೀತಿಯಂತಿದೆ ಎಂದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಋಣ ತೀರಿಸುವುದು ಹೇಗೆ ಎನ್ನುವುದಕ್ಕೆ ಬಸವರಾಜ ಹೊರಟ್ಟಿ ಉತ್ತಮ ಉದಾಹರಣೆ. ಅವರು ಊರಿನ, ಕಲಿತ ಶಾಲೆಯ, ಹೆತ್ತ ತಾಯಿಯ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಹೊರಟ್ಟಿಯವರು ಶಿಕ್ಷಕರಾಗಿ, ಸಂಘಟಕರಾಗಿ ಬಂದಿದ್ದಾರೆಯೇ ಹೊರತು ರಾಜಕಾರಣಿಯಲ್ಲ. ರಾಜಕಾರಣದಲ್ಲಿ ಅಧಿಕಾರದ ಹಪಾಹಪಿತನ ಇರುತ್ತದೆ. ಆದರೆ, ಆ ಮನಸ್ಥಿತಿ ಹೊರಟ್ಟಿಯವರಲ್ಲಿಲ್ಲ ಎಂದರು.ಧಾರವಾಡ ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಮಾಲಗತ್ತಿ ಮಾತನಾಡಿ, ಇಂದು ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಮುಂದೆ ಇನ್ನೂ ಬದಲಾಗಿದೆ. ತಂತ್ರಜ್ಞಾನದ ಪರಿಣಾಮ ಪತ್ರಿಕೋದ್ಯಮದ ಕಲಿಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ, ಕಂಪನಿಯ ಸಿಇಒ ರವೀಂದ್ರ ಜಲರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ಶಂಕರ ಪಾಟೀಲ ಕುಲಕರ್ಣಿ ಸೇರಿದಂತೆ ಹಲವರಿದ್ದರು.