ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿನಿಯರಿಗೆ ಆಂತರಿಕ ಪರೀಕ್ಷೆಯಲ್ಲಿ ಅಂಕ ಕೊಡಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸಹ್ಯಾದ್ರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮುದುಕಪ್ಪ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್ಎಸ್‌ಯುಐ) ಜಿಲ್ಲಾ ಶಾಖೆ ಕಾರ್ಯಕರ್ತರು ಸೋಮವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ತನ್ನ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳಲು ಉಪನ್ಯಾಸಕನಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿದ್ದ ಪ್ರೊ. ಮುದುಕಪ್ಪ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಈ ಬಗ್ಗೆ ನೊಂದ ವಿದ್ಯಾರ್ಥಿನಿಯರು ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ನೆಪ ಮಾತ್ರಕ್ಕೆ ತಿಳುವಳಿಕೆ ಪತ್ರವನ್ನು ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಅನೇಕ ಮಹನೀಯರು ಕಲಿತು, ಕಲಿಸಿದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ನೊಂದ ವಿದ್ಯಾರ್ಥಿನಿಯರು ದೂರು ಕೊಟ್ಟರೂ ಪ್ರಾಂಶುಪಾಲರು ಕ್ರಮ ಕೈಗೊಂಡಿಲ್ಲ. ನಂತರ ಎನ್‌ಎಸ್‌ಯುಐ ಪ್ರಾಂಶುಪಾಲ ಸಿರಾಜ್‌ ಅಹಮದ್‌ ಮೂಲಕ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಸಂಪರ್ಕಿಸಿ ಘಟನೆಯ ವಿವರಗಳನ್ನು ನೀಡಲಾಗಿತ್ತು. ಆಗ ಕುಲಪತಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಉಪನ್ಯಾಸಕ ಪ್ರೊ.ಮುದುಕಪ್ಪ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.

ಕೂಡಲೇ ಉಪನ್ಯಾಸಕ ಪ್ರೊ.ಮುದುಕಪ್ಪನನ್ನು ಕೆಲಸದಿಂದ ವಜಾಗೊಳಿಸಿ ವಿವಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಎನ್‌ಎಸ್‌ಯುಐ ವಿವಿ ಬಂದ್‌ನಂತಹ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಕಾರ್ಯದರ್ಶಿ ಎಚ್‌.ಎಸ್‌.ಬಾಲಾಜಿ, ನಗರಾಧ್ಯಕ್ಷ ರವಿಕುಮಾರ್, ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಅಭಿಷೇಕ್ ಅನುಪಿನ ಕಟ್ಟೆ, ಪ್ರಜ್ವಲ್, ಶ್ರೀಕಾಂತ್, ಕಿಸನ್, ಯೂಸಫ್, ಸಾದುಲ್ಲ, ಅಭಿಷೇಕ್, ಪ್ರಭು, ಶ್ರೇಯಸ್, ಕುಮಾರ್ ಮತ್ತಿತರರು ಇದ್ದರು.