Observance of a Special Day at the Navachetana School for the Intellectually Disabled in Soraba
ಕನ್ನಡಪ್ರಭ ವಾರ್ತೆ ಸೊರಬ
ಮಕ್ಕಳಿಗೆ ಶಿಕ್ಷಣದ ಜತೆಗೆ ಸಮಾಜಮುಖಿ ಚಿಂತನೆ, ನೈತಿಕ ಮೌಲ್ಯಗಳನ್ನು ಬಿತ್ತುವ ಸಾಹಿತಿಗಳ ಪರಿಚಯ ಮತ್ತು ಮಾನವೀಯ ಗುಣಗಳನ್ನು ಬೆಳೆಸಬೇಕು. ಈ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ನುಡಿದರು.ಪಟ್ಟಣದ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳನ್ನು ಬೆಳೆಸುವ ಬದಲು ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳ ಸಣ್ಣಪುಟ್ಟ ಸಾಧನೆ ಮತ್ತು ಬೆಳವಣಿಗೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಮೆಸ್ಕಾಂ ಗುತ್ತಿಗೆದಾರ ಪಾಂಡುರಂಗ ಮಾತನಾಡಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯಾ ನಂತರ ದೇಶದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದವರು. ಅವರ ಆದರ್ಶಗಳು, ದೂರದೃಷ್ಟಿ ಹಾಗೂ ಮಕ್ಕಳ ಮೇಲಿನ ಪ್ರೀತಿ ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.
ಪತ್ರಕರ್ತ ನೋಪಿ ಶಂಕರ್ ಮಾತನಾಡಿ, ಸಂಸ್ಕಾರವಂತ ಮಕ್ಕಳು ಮನೆ, ಊರು, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಪೂರಕ ಶಕ್ತಿಯಾಗುತ್ತಾರೆ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ವಕ್ತಾರರಾಗಿ ಮಕ್ಕಳು ರೂಪುಗೊಳ್ಳಬೇಕು. ವಿಶೇಷವಾಗಿ ವಿಶೇಷ ಚೇತನ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಸ್ಥೆಯ ದಾನಿ ಕುಮಾರ್ ಎನ್. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಗುತ್ತಿಗೆದಾರ ಪಾಂಡುರಂಗ, ಸಮಾಜ ಸೇವಕರಾದ ರಾಜು ಹಿರಿಯಾವಲಿ, ಪತ್ರಕರ್ತ ನೋಪಿ ಶಂಕರ್, ಮೋಹನ, ಅರುಣಕುಮಾರ್, ಮುಖ್ಯ ಶಿಕ್ಷಕ ಎಸ್. ರವೀಂದ್ರ, ಹಿರಿಯ ಶಿಕ್ಷಕ ಕೆ.ಬಿ. ಪುಟ್ಟರಾಜು, ಶಿಕ್ಷಕಿಯರಾದ ಗಾಯತ್ರಿ ನಾಯ್ಕ್, ಸುವರ್ಣ ಎಸ್. ಹಾಗೂ ಮಂಗಳ ಪೂಜಾರ್ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.-------
ಫೋಟೊ:೧೪ಕೆಪಿಸೊರಬ-೦೧ :ಸೊರಬ ಪಟ್ಟಣದ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು.