ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಕಾರಾಗೃಹಗಳಲ್ಲಿ ಎಷ್ಟೇ ರಕ್ಷಣಾತ್ಮಕ ಹಾಗೂ ಕಟ್ಟುನಿಟ್ಟಿನ ಕ್ರಮ ಅನುಸರಿಸಿದರೂ ಕೈದಿಗಳು ಹಾಗೂ ಕಿಡಿಗೇಡಿಗಳು ಅಕ್ರಮ ವಸ್ತುಗಳನ್ನು ಜೈಲಿನೊಳಗೆ ತರುವುದು ಗೊತ್ತಿರುವ ಸಂಗತಿ. ಎಷ್ಟೇ ತಪಾಸಣೆ, ಪರಿಶೀಲನೆ ನಂತರವೂ ಸಾಕಷ್ಟು ಬಾರಿ ಜೈಲುಗಳಲ್ಲಿ ಗಾಂಜಾ, ಸಿಗರೇಟು ಅಂತಹ ವಸ್ತುಗಳು ಪತ್ತೆಯಾದ ಅನೇಕ ಉದಾಹರಣೆಗಳಿವೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನಗೆ ನೀಡಿದ ರಾಜಾತಿಥ್ಯದ ಪ್ರಕರಣ ಇದಕ್ಕೆಲ್ಲ ಪುಷ್ಟಿ ನೀಡುವಂತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಾರಾಗೃಹಗಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ತಪಾಸಣೆ ವಹಿಸಲಾಗಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲೂ ಸಾಕಷ್ಟು ತಪಾಸಣೆ, ಪರಿಶೀಲನೆ ಹಾಗೂ ಹದ್ದಿನ ಕಣ್ಣು ಇದೆ. ಈ ಮಧ್ಯೆ ತಪಾಸಣೆಯ ಭಾಗವಾಗಿ, ಕಾಂಪೌಂಡ್ ಸುತ್ತಲಿನ ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ಹೊರಗಿನಿಂದ ಜೈಲು ಭಾಗದೊಳಕ್ಕೆ ಯಾರಾದರೂ ಏನಾದರೂ ಎಸೆದರೆ ಪತ್ತೆ ಮಾಡಲು ಅನುಕೂಲವಾಗಲು ನಾಲ್ಕು ದಿಕ್ಕಿಗೆ 30 ಅಡಿ ಎತ್ತರದ ವೀಕ್ಣಾ ಗೋಪುರ ನಿರ್ಮಾಣ ಮಾಡಲಾಗುತ್ತಿದೆ.ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ನಿಗಾ ನಿಟ್ಟಿನಲ್ಲಿ ಸುತ್ತ ನಾಲ್ಕು ವೀಕ್ಷಣಾ ಗೋಪುರ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಶೇ.75ರಷ್ಟು ಮುಗಿದಿದೆ. ಜೈಲು ಭಾಗದಲ್ಲಿ ಕಣ್ಗಾವಲಿಗೆ ಒಳಭಾಗದಲ್ಲಿ 55 ಹಾಗೂ ಸುತ್ತ (ಹೊರ ವಲಯ) 10 ಒಟ್ಟು 65 ಸಿಸಿ ಟಿವಿ ಕ್ಯಾಮೆರಾಗಳಿವೆ. ನಿಗಾ ಇನ್ನಷ್ಟು ಬಿಗಿಗೊಳಿಸಲು ನಾಲ್ಕು ದಿಕ್ಕುಗಳಲ್ಲಿ ವೀಕ್ಷಣಾ ಗೋಪುರ ಸಜ್ಜುಗೊಳಿಸಲಾಗುತ್ತಿದೆ. ₹ 1 ಕೋಟಿ ವೆಚ್ಚದಲ್ಲಿ ಗೋಪುರಗಳು ನಿರ್ಮಾಣವಾಗಲಿವೆ. ಗೋಪುರದ ಎತ್ತರ 30 ಅಡಿ ಇದ್ದು ಕಾಮಗಾರಿಯು ಇನ್ನು ನಾಲ್ಕು ತಿಂಗಳಲ್ಲಿ ಮುಗಿಸುವುದಾಗಿ ಗುತ್ತಿಗೆದಾರ ತಿಳಿಸಿದ್ದಾರೆ ಎಂದು ಕಾರಾಗೃಹ ಅಧೀಕ್ಷಕರಾದ ಪಿ. ಮಹದೇವನಾಯ್ಕ ಪತ್ರಿಕೆಗೆ ಮಾಹಿತಿ ನೀಡಿದರು.
ಬೆಂಗಳೂರು ಜೈಲು ಸುತ್ತ ಗೋಪುರಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಈಗ ನಿರ್ಮಿಸಲಾಗುತ್ತಿದೆ. ಗೋಪುರದಲ್ಲಿ 24 ಗಂಟೆ ಶಸ್ತ್ರಧಾರಿ ಸಿಬ್ಬಂದಿ ಕಾರ್ಯನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ವೀಕ್ಷಣೆಗೆ ಬೈನಾಕ್ಯುಲರ್ ನೀಡಲಾಗುವುದು. ಅಂದಾಗ ಸೂಕ್ಷ್ಮ ಅಂಶಗಳು ಸಹ ಪತ್ತೆ ಮಾಡಬಹುದು. ಜೈಲಿನ ಸುತ್ತಲಿನ ಕಾಂಪೌಂಡ್ ಗೋಡೆಯ ಮೇಲೆ ಬೇಲಿ (ಫೆನ್ಸಿಂಗ್) ನಿರ್ಮಾಣ ಮಾಡಬೇಕು, ಆವರಣ ಪ್ರದೇಶಕ್ಕೆ ಯಾರೂ ಜಿಗಿಯದಂತೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಕಾಂಪೌಂಡ್ ಮೇಲೆ ಮೂರು ಅಡಿ ಬ್ಲೇಡ್ ಫೆನ್ಸಿಂಗ್ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಹದೇವನಾಯ್ಕ ತಿಳಿಸಿದರು.ಜೈಲು ಅವರಣದ ಒಟ್ಟು ವಿಸ್ತೀರ್ಣ 59 ಎಕರೆ, ಈ ಪೈಕಿ 19 ಎಕರೆ ಪ್ರದೇಶದಲ್ಲಿ ಜೈಲು ಕಟ್ಟಡ ಇದೆ. ಕಟ್ಟಡದಲ್ಲಿ 12 ಡಾರ್ಮಿಟರಿ ಹಾಗೂ 18 ಸೆಲ್‌ಗಳು ಇವೆ. ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಬೆಂಗಳೂರಿನ ಗಿರಿನಗರದ ಧನರಾಜ್ ಅಲಿಯಾಸ್ ರಾಜು (ನಟ ದರ್ಶನ್ ತಂಡದಲ್ಲಿ ಗುರುತಿಸಿಕೊಂಡಿದ್ದವನು ಈ ಜೈಲಿನಲ್ಲಿ ಇದ್ದಾರೆ. ಈತ ಸಹಿತ ಮೂವರನ್ನು ಒಂದು ಸೆಲ್‌ನಲ್ಲಿ ಇರಿಸಲಾಗಿದೆ. ಇದಲ್ಲದೇ ಒಟ್ಟು 583 ಪುರುಷ, 21 ಮಹಿಳಾ ಸೇರಿದಂತೆ 604 ಕೈದಿಗಳು ಇಲ್ಲಿದ್ದು, ವೀಕ್ಷಣಾ ಗೋಪುರದ ಅಗತ್ಯತೆ ಸಾಕಷ್ಟಿತ್ತು. ಪ್ಲಾಸ್ಟಿಕ್ ಹಾಳೆಯಲ್ಲಿ ಗಾಂಜಾ, ಮೊಬೈಲ್ ಅಂತಹ ಅಕ್ರಮ ವಸ್ತುಗಳನ್ನು ಬಾಲ್ ಆಕಾರದಲ್ಲಿ ಮಾಡಿ ಕಾಂಪೌಂಡ್ ಒಳಗೆ ಎಸೆಯದಂತೆ ಈ ಮೂಲಕ ತಡೆಯುವ ಕಾರ್ಯಾಚರಣೆ ತಡವಾದರೂ ಆಗಿದ್ದು ಶ್ಲಾಘನೀಯ.
ಒಂದೂವರೆ ಶತಮಾನದ ಇತಿಹಾಸ
ಬೆಳಗಾವಿ-ಬೆಂಗಳೂರು ಹೆದ್ದಾರಿ ಬದಿಯ ಈ ಕಾರಾಗೃಹ ಬ್ರಿಟಿಷರ ಕಾಲದ್ದು. 1858ರಲ್ಲಿ ಆರಂಭವಾಗಿರುವ ಈ ಕಾರಾಗೃಹವು 166 ವರ್ಷಗಳ ಚರಿತ್ರ ಹೊಂದಿದೆ. ಉಪ ಕಾರಾಗೃಹವಾಗಿ ಕಾರ್ಯಾರಂಭಿಸಿತ್ತು. 1931ರಲ್ಲಿ ಈ ಕಟ್ಟಡದ ಆವರಣದಲ್ಲಿ ತರುಣ ಬಂದಿಖಾನೆ ಪ್ರಾರಂಭಿಸಲಾಗಿತ್ತು. 1963ರಲ್ಲಿ ಇಲ್ಲಿ ಬಾಲಪರಾಧಿ ಶಾಲೆ ತೆರೆಯಲಾಗಿತ್ತು. 2007ರಲ್ಲಿ ಈ ಜಿಲ್ಲಾ ಉಪ ಕಾರಾಗೃಹವನ್ನು ಕೇಂದ್ರ ಕಾರಾಗೃಹವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಪ್ರಸ್ತುತ ಎರಡು ಜಿಲ್ಲಾ ಕಾರಾಗೃಹ, ಒಂದು ಉಪಕಾರಾಗೃಹ ಇದರ ವ್ಯಾಪ್ತಿಯಲ್ಲಿವೆ. 575 ಪುರುಷ ಹಾಗೂ 100 ಮಹಿಳಾ ಒಟ್ಟು 675 ಕೈದಿಗಳನ್ನು ಇಡುವ ಸ್ಥಳವಕಾಶ ಇದೆ.