ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಹಬ್ಬಗಳಲ್ಲಿ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತದೆ. ಅದೇ ರೀತಿ ಇಂದಿನ ಮಹಾಲಯ ಅಮಾವಾಸ್ಯೆ ಹಬ್ಬದಲ್ಲೂ ಕೂಡ ಮಾಂಸದ ಬೆಲೆ ದುಪ್ಪಟ್ಟಾಗಿತ್ತು. ಅದರಲ್ಲೂ ಗುಡ್ಡೆಬಾಡಿಗೆ ವಿಶೇಷ ಮನ್ನಣೆ ಇದ್ದು, ಹೀಗಾಗಿ ಜಿಲ್ಲೆಯಲ್ಲಿ ಹಬ್ಬದ ನೆಪದಲ್ಲಿ ಮಾಂಸದ ಬೆಲೆಯೂ ಹೆಚ್ಚಳವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕುಟುಂಬದಲ್ಲಿ ಅಗಲಿದ ಹಿರಿಯರನ್ನು ನೆನೆಯುವ ಮೂಲಕ ಜಿಲ್ಲೆಯ ಜನರು ಶನಿವಾರ ಪಿತೃಪಕ್ಷ (ಮಹಾಲಯ ಅಮಾವಾಸ್ಯೆ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಅಮಾವಾಸ್ಯೆ ಅಂಗವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜನರು ಸಂಜೆ ಮೃತ ಹಿರಿಯರನ್ನು ಸ್ಮರಿಸುತ್ತಾ ಸಮಾಧಿಗಳಿಗೆ ಪೂಜೆ ಸಲ್ಲಿಸಿ, ಮನೆಯಲ್ಲಿ ಎಡೆ ಇಟ್ಟು ಪೂಜಿಸಿ ಪಿತೃಗಳ ಮೇಲಿನ ಪ್ರೀತಿ, ಭಕ್ತಿಯನ್ನು ಸಮರ್ಪಿಸಿದರು.

ನಂತರ ಸಂಜೆ ತಮ್ಮ ಮನೆಗಳಲ್ಲಿ ಎಡೆ ಇಟ್ಟು ಪೂಜೆ ಸಲ್ಲಿಸಿದರು. ಶನಿವಾರ ಬೆಳಗ್ಗೆಯಿಂದಲೇ ಹಬ್ಬದ ಸಿದ್ಧತೆ ನಡೆದಿತ್ತು. ಕಳೆದ ಒಂದು ವಾರಗಳಿಂದಲೇ ಮನೆಗಳಲ್ಲಿ ಚಕ್ಕುಲಿ, ನಿಪ್ಪಟ್ಟು, ವಡೆ, ಕಜ್ಜಾಯ, ಕೋಡುಬಳೆ ಸೇರಿದಂತೆ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಯಾರಿಸಿಕೊಂಡು, ಶನಿವಾರ ಬೇಕರಿ ತಿನಿಸುಗಳನ್ನು ತಂದು ಎಡೆ ಇಟ್ಟು ಪೂಜಿಸಿ, ಹಿರಿಯರನ್ನು ಸ್ಮರಿಸಿದರು. ಸಂಪ್ರದಾಯದಂತೆ ದೂರ ದೂರಿನ ತಮ್ಮೆಲ್ಲಾ ನೆಂಟರಿಷ್ಟರನ್ನು ಆಹ್ವಾನಿಸಿ ಬಾಡೂಟ ಹಾಗೂ ಸಿಹಿ ಊಟ ಹಾಕಿ ಹಬ್ಬವನ್ನು ಆಚರಿಸಿದರು.

ಮಾಂಸಕ್ಕೆ ಹೆಚ್ಚಿದ ಬೇಡಿಕೆ:

ಜಿಲ್ಲೆಯಲ್ಲಿ ಯಾವುದೇ ಹಬ್ಬಗಳಲ್ಲಿ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತದೆ. ಅದೇ ರೀತಿ ಇಂದಿನ ಮಹಾಲಯ ಅಮಾವಾಸ್ಯೆ ಹಬ್ಬದಲ್ಲೂ ಕೂಡ ಮಾಂಸದ ಬೆಲೆ ದುಪ್ಪಟ್ಟಾಗಿತ್ತು. ಅದರಲ್ಲೂ ಗುಡ್ಡೆಬಾಡಿಗೆ ವಿಶೇಷ ಮನ್ನಣೆ ಇದ್ದು, ಹೀಗಾಗಿ ಜಿಲ್ಲೆಯಲ್ಲಿ ಹಬ್ಬದ ನೆಪದಲ್ಲಿ ಮಾಂಸದ ಬೆಲೆಯೂ ಹೆಚ್ಚಳವಾಗಿತ್ತು. ಪ್ರತಿ ಕಿಲೋ ಮೇಕೆ/ಟಗರು ಮಾಂಸಕ್ಕೆ 650 ರಿಂದ 700 ರು. ದರವಿತ್ತು. ಕೆಲವೆಡೆ 750 ರು. ನಿಗದಿಪಡಿಸಲಾಗಿತ್ತು. ಮೂರು ದಿನಗಳ ಹಿಂದೆ 200 ಇದ್ದ ಕೋಳಿ ಮಾಂಸದ ಬೆಲೆಯೂ 220 ರು. ಬೆಲೆಗೇರಿತ್ತು.

ಖರೀದಿ ಪ್ರಕ್ರಿಯೆ ಜೋರು:

ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಮಂಡ್ಯ ನಗರ ಹಾಗೂ ಇತರೆ ತಾಲೂಕು ಕೇಂದ್ರಗಳಲ್ಲಿ ಎಡೆಸಾಮಾನು, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯಿತು. ಪೇಟೆಬೀದಿಯು ಜನಜಂಗುಳಿಯಿಂದ ತುಂಬಿತ್ತು.

ಮಹಾಲಯ ಅಮಾವಾಸ್ಯೆಯು ಮಂಡ್ಯ ಭಾಗದಲ್ಲಿ ಮರ್‍ನವಮಿ ಹಬ್ಬ. ಮಾಳಪಕ್ಷ, ಪಿತೃಪಕ್ಷವೆಂದೇ ಪ್ರಚಲಿತವಾಗಿದೆ.

ಕುಟುಂಬದಲ್ಲಿ ವಿಧಿವಶರಾದ ಹಿರಿಯರನ್ನು ಸ್ಮರಿಸುವ, ಅವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಎಡೆ ಇಟ್ಟು ಆಚರಿಸಲ್ಪಡುವ ಮರ್‍ನವಮಿಮಿ ಹಬ್ಬಕ್ಕೆ ಜಿಲ್ಲೆಯಲ್ಲಿ ವಿಶೇಷ ಮನ್ನಣೆ ಇದ್ದು, ಪ್ರತಿ ವರ್ಷ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಅಮಾವಾಸ್ಯೆ ದಿನದಂದೇ ಹಬ್ಬ ಆಚರಿಸುವುದು ವಾಡಿಕೆ. ಕೆಲವೆಡೆ ಆಯುಧಪೂಜೆ, ಏಕಾದಶಿ ಉಪವಾಸದ ಹಬ್ಬದ (ಆಷಾಢ) ವೇಳೆ ಪಿತೃಪಕ್ಷ ಆಚರಿಸುವುದುಂಟು.

ಕೆಲವೆಡೆ ಪಿತೃಪಕ್ಷ ಆಚರಿಸುವವರು ವೈದಿಕರನ್ನು ಮನೆಗೆ ಆಹ್ವಾನಿಸಿ ಅವರಿಂದ ಪೂಜೆ ನೆರವೇರಿಸಿ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತರ್ಪಣ ಬಿಟ್ಟು ಹಿರಿಯರನ್ನು ನೆನೆದರು.