ಸಿಎಂ ಜನಪ್ರಿಯತೆ ಹೆಚ್ಚಾದಂತೆ ಅಡತಡೆ ಸಹಜ: ಸಚಿವ ಎಚ್‌.ಕೆ. ಪಾಟೀಲ

| Published : Nov 06 2024, 11:57 PM IST

ಸಾರಾಂಶ

ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಬಿಜೆಪಿಗರಿಗೆ ಶಂಕೆ ಯಾಕೆ‌ ವ್ಯಕ್ತವಾಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಸಾವಿರಾರು ಕೋಟಿ ರುಪಾಯಿ ಗಣಿ ಹಗರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ್ದು ನಮ್ಮ‌ ಲೋಕಾಯುಕ್ತ ಅಲ್ಲವೆ?

ಹುಬ್ಬಳ್ಳಿ:

ಮುಖ್ಯಮಂತ್ರಿಗಳ ಜನಪ್ರಿಯತೆ ಹೆಚ್ಚಾದಂತೆ ಅಡ್ಡಿ-ಆತಂಕಗಳೂ ಹೆಚ್ಚಾಗಿವೆ. ಮುಡಾ ಹಗರಣದ ವಿಚಾರಣೆಗೆ ಹಾಜರಾಗಿದ್ದಾರೆ. ಯಾವ ಸಮಸ್ಯೆಗಳು ಆಗದಂತೆ ಆರೋಪದಿಂದ ಹೊರ ಬರಲಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ‌ ಎಂಬುದು ಬಿಜೆಪಿಗರ ಒತ್ತಾಯ. ಅದರಂತೆ ಚುನಾವಣಾ ಬಾಂಡ್ ಹಗರಣದಲ್ಲಿ ಪ್ರಧಾನಿಗಳೂ ರಾಜೀನಾಮೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಯಾರು ತನಿಖೆ ನಡೆಸಬೇಕು?:

ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಬಿಜೆಪಿಗರಿಗೆ ಶಂಕೆ ಯಾಕೆ‌ ವ್ಯಕ್ತವಾಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಸಾವಿರಾರು ಕೋಟಿ ರುಪಾಯಿ ಗಣಿ ಹಗರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ್ದು ನಮ್ಮ‌ ಲೋಕಾಯುಕ್ತ ಅಲ್ಲವೆ? ಲೋಕಾಯುಕ್ತ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿಗಳು ಪ್ರಭಾವ ಬೀರುತ್ತಾರೆ ಎನ್ನುವುದಾದರೆ ಕೇಂದ್ರ ಸಚಿವರ ವಿರುದ್ಧದ ಹಗರಣದ ಬಗ್ಗೆ ಯಾರು ತನಿಖೆ ನಡೆಸಬೇಕು ಎಂದು ಪ್ರಶ್ನಿಸಿದರು.

ಈ ಪ್ರಕರಣದ ಆರೋಪದ‌ ಕುರಿತು ತನಿಖೆ ವಿಚಾರದಲ್ಲಿ ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು‌ ಕಾನೂನು ಇದೆಯೇ? ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಗರು ಆರೋಪಕ್ಕೂ‌ ಆತ್ಮಾವಲೋಕನ‌‌ ಮಾಡಿಕೊಳ್ಳಲಿ ಎಂದು ಹರಿಹಾಯ್ದರು.

ಅನಗತ್ಯ ಗೊಂದಲ:

ವಕ್ಫ್ ಕುರಿತಾಗಿ ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯವನ್ನು ದೊಡ್ಡದಾಗಿಸಲು ಮುಂದಾಗಿದೆ. ವಕ್ಫ್ ಪ್ರಕರಣದಲ್ಲಿ‌ ಯಾವ ಕಾಯ್ದೆ ಉಲ್ಲಂಘನೆ ಆಗಿದೆ ಎಂದು‌ ಸಂಸದೀಯ ಜಂಟಿ‌ ಸಮಿತಿ ಬರುತ್ತಿದೆಯೋ‌ ಗೊತ್ತಿಲ್ಲ. ಮೂರು ವಿಧಾನಸಭಾ ಕ್ಷೇತ್ರಗಳ‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.