ಫ್ಲೈಓವರ್‌ಗೆ ಅಡೆ-ತಡೆ: ಮಾಹಿತಿ ಪಡೆದ ಸಚಿವ ಲಾಡ್‌

| Published : Aug 16 2024, 12:52 AM IST

ಸಾರಾಂಶ

ಗೋಕುಲ ರಸ್ತೆ, ಬಸವ ವನ, ದೇಸಾಯಿ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೂ ಮೇಲ್ಸೇತುವೆ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಚನ್ನಮ್ಮ ವೃತ್ತದಿಂದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗೆ ಕೊಂಚ ಅಡೆತಡೆಯುಂಟಾಗಿದೆ.

ಹುಬ್ಬಳ್ಳಿ:

ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಪ್ರಗತಿ ಹಾಗೂ ಕಾಮಗಾರಿಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಅಡೆ-ತಡೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಗೌಪ್ಯಸಭೆ ನಡೆಸಿದ ಸಚಿವರು, ಅಧಿಕಾರಿಗಳಿಂದ ಫ್ಲೈಓವರ್‌ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಗೋಕುಲ ರಸ್ತೆ, ಬಸವ ವನ, ದೇಸಾಯಿ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೂ ಮೇಲ್ಸೇತುವೆ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಚನ್ನಮ್ಮ ವೃತ್ತದಿಂದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗೆ ಕೊಂಚ ಅಡೆತಡೆಯುಂಟಾಗಿದೆ. ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಏನೇನು ಅಭಿವೃದ್ಧಿ ಆಗಿದೆ ಎಂದು ಕೇಳಿದರು. ಅದಕ್ಕೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು ಎಂದು ಹೇಳಲಾಗಿದೆ.ರಾಣಿ ಚೆನ್ನಮ್ಮ ಮೈದಾನ (ಈದ್ಗಾ)ದ ಎರಡು ಕಡೆಯ ಗೋಡೆಗಳ ತೆರವುಗೊಳಿಸಲು ಉಂಟಾಗಿರುವ ಆಕ್ಷೇಪ, ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಶಿವಕೃಷ್ಣ ಮಂದಿರದ ಜಾಗವನ್ನು ಸ್ವಾಧೀನಪಡಿಸಿಕೊಳ್ಳದಂತೆ ಕೋರ್ಟ್‌ ತಡೆ ನೀಡಿರುವ ಕುರಿತು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಈ ಬಗ್ಗೆ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಏನೇನು ಪೂರ್ವಯೋಜನೆ ಮಾಡಿಕೊಂಡಿದ್ದರು. ಈಗ ಯಾಕೆ ಸಮಸ್ಯೆಗಳು ತಲೆದೂರಿವೆ, ಅವುಗಳನ್ನು ಹೇಗೆ ಪರಿಹರಿಸಬೇಕು, ಮುಂದೆ ಏನು ಮಾಡಬೇಕು ಎಂಬುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾಹಿತಿ ಪಡೆದಿದ್ದಾರೆ. ಎಲ್ಲ ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ತರಲು ಸೂಚಿಸಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ಸಭೆ ನಡೆಸಿದ್ದ ಮಾಲೀಕರು:

ರಾಣಿ ಚನ್ನಮ್ಮ ಮೈದಾನ(ಈದ್ಗಾ) ಮೈದಾನ ಕಂಪೌಂಡ್ ತೆರವುಗೊಳಿಸಲು ಅನುಮತಿ ಹಾಗೂ ಭದ್ರತೆ ಒದಗಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೇ ಸಿದ್ದಪ್ಪ ಕಂಬಳಿ ರಸ್ತೆ ಶಿವಕೃಷ್ಣ ಮಂದಿರ ಜಾಗವನ್ನು ಸ್ವಾನ ಮಾಡಿಕೊಳ್ಳದಂತೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಆ ರಸ್ತೆಯಲ್ಲಿರುವ ಉಳಿದ ಮಾಲೀಕರು ಶಿವಕೃಷ್ಣ ಮಂದಿರದಲ್ಲಿ ಇತ್ತೀಚಿಗೆ ಸಮಾಲೋಚನೆ ನಡೆಸಿದ್ದರು.