30X40 ಸೈಟಿನ 3 ಅಂತಸ್ತು ಕಟ್ಟಡಗಳಿಗೆ ಓಸಿ ವಿನಾಯ್ತಿ

| Published : Jul 17 2025, 12:42 AM IST

ಸಾರಾಂಶ

ಕಟ್ಟಡ ನಿರ್ಮಾಣ ಪ್ರಮಾಣ ಪತ್ರ (ಸಿಸಿ), ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಲ್ಪಿಸದಂತೆ ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿದ್ದ ರಾಜ್ಯದ ಲಕ್ಷಾಂತರ ಕಟ್ಟಡಗಳ ಮಾಲೀಕರ ನೆರವಿಗೆ ಇದೀಗ ನಗರಾಭಿವೃದ್ಧಿ ಇಲಾಖೆ ಮುಂದೆ ಬಂದಿದೆ.

- ಸರ್ಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಸ್ತಾಪ

- ಆತಂಕದಲ್ಲಿದ್ದ ಲಕ್ಷಾಂತರ ಜನರಿನ್ನು ನಿರಾಳ

==

ಓಸಿ ಸಿಗದೇ ಹೋದಲ್ಲಿ ಲಕ್ಷಾಂತರ ಜನರು ಸಂಕಷ್ಟ ಎದುರಿಸುವ ಕುರಿತು ಕನ್ನಡಪ್ರಭ ಏ.15ರಂದು ವರದಿ ಮಾಡಿತ್ತು.

==

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಟ್ಟಡ ನಿರ್ಮಾಣ ಪ್ರಮಾಣ ಪತ್ರ (ಸಿಸಿ), ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಲ್ಪಿಸದಂತೆ ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿದ್ದ ರಾಜ್ಯದ ಲಕ್ಷಾಂತರ ಕಟ್ಟಡಗಳ ಮಾಲೀಕರ ನೆರವಿಗೆ ಇದೀಗ ನಗರಾಭಿವೃದ್ಧಿ ಇಲಾಖೆ ಮುಂದೆ ಬಂದಿದೆ.

1200 ಚದರಡಿ ನಿವೇಶನದಲ್ಲಿ ಮೂರಂತಸ್ತಿನ ಕಟ್ಟಡಗಳಿಗೆ ‘ಓಸಿ’ ಯಿಂದ ವಿನಾಯ್ತಿ ನೀಡಲು ‘ಮಾದರಿ ಕಟ್ಟಡ ಬೈಲಾ’ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ.

ಈ ನಿರ್ಧಾರದಿಂದಾಗಿ ವಿಶೇಷವಾಗಿ 30*40 ನಿವೇಶನದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳ ಮಾಲೀಕರಿಗೆ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಜಲಮಂಡಳಿ ಸಾವಿರಾರು ಮನೆಗಳಿಗೆ ನೀರಿನ ಸಂಪರ್ಕ ನೀಡಿದೆ. ಆದರೆ ಓಸಿ ಪಡೆಯದ ಕಾರಣ ನೀರಿನ ಶುಲ್ಕದ ಜೊತೆಗೆ ದಂಡವನ್ನೂ ವಿಧಿಸುತ್ತಿದೆ. ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ಹೆಚ್ಚಿನ ಕಟ್ಟಡ ಮಾಲೀಕರ ಸಮಸ್ಯೆ ಬಗೆಹರಿಯಲಿದೆ.

ಈ ಕುರಿತು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಎ)- 2024, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 (ಕೆಎಂಸಿ ಕಾಯ್ದೆ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ‘ಮಾದರಿ ಕಟ್ಟಡ ಬೈಲಾ’ಗಳ ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಮಾಣಪತ್ರದಿಂದ ವಿನಾಯ್ತಿ:

1,200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲ ಅಂತಸ್ತು ಹಾಗೂ ಎರಡು ಅಂತಸ್ತು ಅಥವಾ ಸ್ಟಿಲ್ಟ್ ಪಾರ್ಕಿಂಗ್‌ ಮತ್ತು ಮೂರು ಅಂತಸ್ತು ವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯ್ತಿ ನೀಡಲಾಗುತ್ತದೆ. ಜಿಬಿಎ-2024 ಕಾಯ್ದೆಯಲ್ಲಿ ಓಸಿಗೆ ವಿನಾಯಿತಿ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಬಹುದು ಎಂದು ಸೆಕ್ಷನ್ 241(7)ರಲ್ಲಿ ಹೇಳಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆ–2020, ಕೆಎಂಸಿ-1976 ಕಾಯ್ದೆ, ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಈ ಅವಕಾಶ ಇಲ್ಲ.

ಮುಖ್ಯಮಂತ್ರಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ, ಕಾನೂನು, ಆಹಾರ ಮತ್ತು ನಾಗರಿಕ ಪೂರೈಕೆ, ಕೈಗಾರಿಕೆ, ಇಂಧನ, ಕಂದಾಯ, ನಗರಾಭಿವೃದ್ಧಿ, ಪೌರಾಡಳಿತ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ಕಾಯ್ದೆಗಳಲ್ಲೂ ಸಮಾನಾಂತರ ಅವಕಾಶಗಳು ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ಓಸಿ ವಿನಾಯ್ತಿ ನೀಡಲು ನಿಯಮ ರಚಿಸಿ, ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಸ್ಕಾಂ , ಪೌರಾಡಳಿತ, ಇಂಧನ, ಪಂಚಾಯತ್ ರಾಜ್ ಆಯುಕ್ತಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

--

ಯಾರಿಗೆ ಅನ್ವಯ?

1,200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲ ಅಂತಸ್ತು, 2 ಅಂತಸ್ತು ಅಥವಾ ಸ್ಟಿಲ್ಟ್ ಪಾರ್ಕಿಂಗ್‌ ಮತ್ತು ಮೂರು ಅಂತಸ್ತುವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯ್ತಿ.