ಕಾಮಣ್ಣನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

| Published : Mar 14 2025, 01:32 AM IST

ಸಾರಾಂಶ

ಲಕ್ಷಾಂತರ ಭಕ್ತ ಸಮೂಹಕ್ಕೆ ದಿನದ 24 ಗಂಟೆಗಳ ಕಾಲ ದರ್ಶನ ಪಡೆಯಬಹುದು

ನವಲಗುಂದ: ಭಾವೈಕ್ಯತೆ ಸಂಕೇತವಾಗಿರುವ ಇಲ್ಲಿನ ರಾಮಲಿಂಗ ಕಾಮಣ್ಣನಿಗೆ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ವಸ್ತುಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

3ನೆಯ ದಿನವಾದ ಗುರುವಾರ ಕೂಡ ಭಕ್ತ ಸಾಗರ ಹರಿದು ಬಂದಿತ್ತು.

ರಾಮಲಿಂಗ ಕಾಮದೇವರ ಆರಾಧನೆ ಹೋಳಿ ಸಂದರ್ಭದಲ್ಲಿ ನಡೆಯುವುದು ಕರ್ನಾಟಕದಲ್ಲೇ ವಿಶಿಷ್ಟ ಆಚರಣೆಯಾಗಿದ್ದು. ಬೇಡಿದ ವರವ ನೀಡುವ ಭಗವಂತನಾಗಿದ್ದಾನೆ. ವರ್ಷದಿಂದ ವರ್ಷ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿರುವ ಆರಾಧ್ಯ ದೈವ ರಾಮಲಿಂಗ ಕಾಮದೇವರ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತ ಸಮೂಹಕ್ಕೆ ದಿನದ 24 ಗಂಟೆಗಳ ಕಾಲ ದರ್ಶನ ಪಡೆಯಬಹುದು. ಜತೆಗೆ ನಿರಂತರ ಪ್ರಸಾದ ವಿತರಿಸಲಾಗುತ್ತಿದೆ.

ರಾಮಲಿಂಗ ಕಾಮಣ್ಣ ಟ್ರಸ್ಟ್ ಕಮೀಟಿ ಆಯೋಜಿಸಿರುವ ಪ್ರಸಾದ ಹಾಗೂ ನೀರಿನ ಸೇವೆ ಹೊರತಾಗಿಯೂ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಅಭಿಮಾನಿಗಳು ಕುಡಿಯುವ ನೀರಿನ ಬಾಟಲಿ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ.

ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಮಂಜುನಾಥ ಜಾಧವ, ಜೀವನ ಪವಾರ, ಮೋದಿನ್ ಶಿರೂರ, ಸುರೇಶ ಮೇಟಿ, ಹನುಮಂತ ವಾಲಿಕಾರ, ಮಂಜುನಾಥ ಬೈಲೂರ, ಲಕ್ಷ್ಮಣ ಗುಡಾರದ, ಸುಲೇಮಾನ್ ನಾಶಿಪುಡಿ, ಪ್ರವೀಣ ಮೂಗಣ್ಣವರ, ಪ್ರಕಾಶ ಸಾರವರಿ, ಮಲ್ಲಿಕ್, ಶಿವಾನಂದ ಚಲವಾದಿ, ಮಾಬುಸಾಬ್‌ ತಹಶೀಲ್ದಾರ, ಕಲ್ಲಪ್ಪ ದೊಡ್ಡಮನಿ ಸೇರಿದಂತೆ ವಿನೋದ ಅಭಿಮಾನಿ ಬಳಗದ ಕಾರ್ಯಕರ್ತರ ದೊಡ್ಡ ಪಡೆಯೇ ಈ ವಿತರಣೆ ಕಾರ್ಯದಲ್ಲಿ ತೊಡಗಿದೆ.

ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಗುರುವಾರ ಕಾಮದೇವರ ದರ್ಶನಾಶೀರ್ವಾದ ಪಡೆದರು.

ರಾಮಲಿಂಗ ಕಾಮದೇವರು ನಮಗೆ ಕೇವಲ ಹೋಳಿ ಹಬ್ಬಕ್ಕೆ ಸೀಮಿತವಾಗಿಲ್ಲ. ಪ್ರತಿ ಸಂದರ್ಭದಲ್ಲೂ ಕಾಮಣ್ಣ ನಮ್ಮೊಂದಿಗೆ ಇದ್ದಾನೆ. ಆತನ ಆಶೀರ್ವಾದದಿಂದ ನಾವು ಮುನ್ನಡೆಯುತ್ತಿದ್ದೇವೆ. ಬಿಸಿಲಿನಲ್ಲಿ ಚಿಕ್ಕ, ಚಿಕ್ಕ ಮಕ್ಕಳೊಂದಿಗೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಕುಡಿವ ನೀರು, ಮಜ್ಜಿಗೆ ಕೊಡಲು ಆ ಕಾಮಣ್ಣನೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಹೇಳಿದರು.

ಪ್ರತಿ ವರ್ಷವೂ ವಿನೋದ ಅಸೂಟಿ ಅಭಿಮಾನಿ ಬಳಗದಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಂಜು ಜಾಧವ್ ಹೇಳಿದ್ದಾರೆ.

ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಅವರ ಅನುಕೂಲಕ್ಕಾಗಿ ವಿನೋದ ಅಸೂಟಿ ಅಭಿಮಾನಿ ಬಳಗವು ಸೇರಿ ಹಲವಾರು ಸಂಘ ಸಂಸ್ಥೆಗಳು ಸೇವಾ ಮನೋಭಾವನೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಪುರಸಭೆ ಸದಸ್ಯ ಮಹಾಂತೇಶ ಭೋವಿ ಹೇಳಿದ್ದಾರೆ.

ಎಲ್ಲ ಧರ್ಮೀಯರು ರಾಮಲಿಂಗ ಕಾಮದೇವರ ಆರಾಧನೆ ಮಾಡುತ್ತಿರುವುದು ಸೌಹಾರ್ದತೆಗೆ ಸಾಕ್ಷಿ. ಇಲ್ಲಿ ಜಾತಿ, ಧರ್ಮದ ಬೇಧವಿಲ್ಲದೇ ಆಚರಣೆ ನಡೆಯುತ್ತಿದೆ ಎಂದು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಲೇಮಾನ ನಾಶಿಪುಡಿ ಹೇಳಿದ್ದಾರೆ.