ಸಾರಾಂಶ
ಮುಂಡರಗಿ: ಮಕರ ಸಂಕ್ರಾಂತಿ ಅಂಗವಾಗಿ ಮಂಗಳವಾರ ತಾಲೂಕಿನ ಸಿಂಗಟಾಲೂರು ಸುಕ್ಷೇತ್ರಕ್ಕೆ ಸಾವಿರಾರು ಜನ ಆಗಮಿಸಿ ಸಂಕ್ರಾತಿ ಆಚರಿಸಿದರು. ಬೆಳಗ್ಗೆಯಿಂದಲೇ ಸ್ಥಳೀಯ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುವ ಮೂಲಕ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸಂಕ್ರಾತಿ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಿದರು.
ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರ ಸಂಕೇತವಾಗಿ ಮಕರ ಸಂಕ್ರಾತಿ ನಾಡಿನಾದ್ಯಂತ ಎಲ್ಲೆಡೆ ಸಡಗರದಿಂದ ಆಚರಿಸುತ್ತಾರೆ. ಹನ್ನೆರಡು ರಾಶಿ, ಮಾಸಗಳು ಇರುವ ಕಾರಣ ವಷ೯ಕ್ಕೆ ಹನ್ನೆರಡು ಸಂಕ್ರಾತಿಗಳೇ ಸಂಭವಿಸುತ್ತವೆ. ಆದರೆ ಸೂರ್ಯ ಮಿಥುನದಿಂದ ಕರ್ಕಾಟಕಕ್ಕೆ ಪ್ರವೇಶಿಸುವ ಸಂಕ್ರಾತಿ ಒಂದಾದರೆ, ಧನುವಿನಿಂದ ಮಕರಕ್ಕೆ ಸಂಕ್ರಮಿಸುವುದು ಮತ್ತೊಂದು. ಒಂದು ದಕ್ಷಿಣಾಯಣ ಮತ್ತೊಂದು ಉತ್ತರಾಯಣ. ಇದೀಗ ದಕ್ಷಿಣಾಯಣ ಮುಗಿದು ಉತ್ತರಾಯಣ ಪ್ರಾರಂಭವಾಗುವುದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತಿದೆ.ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಟ್ರ್ಯಾಕ್ಟರ್, ಚಕ್ಕಡಿ, ಟಂಟಂ, ಕಾರ್, ಜೀಪ್ ಹಾಗೂ ಮೋಟಾರ ಬೈಕ್‌ಗಳ ಮೂಲಕ ತಂಡೋಪ ತಂಡವಾಗಿ ಹರಿದು ಬಂದಿದ್ದು, ಸಾರಿಗೆ ಇಲಾಖೆಯಿಂದಲೂ ಸಿಂಗಟಾಲೂರು ಕ್ಷೇತ್ರಕ್ಕೆ ವಿಶೇಷ ಬಸ್ ಸಹ ಓಡಿಸುವ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿಗೆ ಆಮಿಸಿದ ಪ್ರವಾಸಿಗರು ನದಿಯಲ್ಲಿ ಸ್ನಾನ ಮಾಡಿ ನದಿಯ ದಂಡೆಯಲ್ಲಿ ಪೂಜೆ ಸಲ್ಲಿಸಿ ಮನೆಯಿಂದ ತಂದಿದ್ದ ವಿವಿಧ ತರನಾದ ಹೋಳಿಗೆ ಹಾಗೂ ಇತರೆ ಸಿಹಿ ತಿನಿಸನ್ನು ಎಡೆ ಮಾಡಿ,ಒಬ್ಬರಿಗೊಬ್ಬರು ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು, ನಂತರ ಗುಡ್ಡದ ಮೇಲಿರುವ ಶ್ರೀಸಿಂಗಟಾಲೂರ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹೊಳೆಯ ದಂಡೆ ಮೇಲೆ ಹಾಗೂ ನದಿ ಪಕ್ಕದ ಉದ್ಯಾನ ವನದಲ್ಲಿ ಕುಳಿತು ಊಟ ಮಾಡುವುದು ಇಲ್ಲಿನ ಸಂಕ್ರಾತಿ ಹಬ್ಬದ ವಿಶೇಷ.ಪ್ರವಾಸಿಗರ ಸಂಖ್ಯೆ ಹೆಚ್ಚಳ: ಸಿಂಗಟಾಲೂರ ಕ್ಷೇತ್ರಕ್ಕೆ ಪಕ್ಕದ ಬಳ್ಳಾರಿ, ವಿಜಯನಗರ, ಹಾವೇರಿ, ಕೊಪ್ಪಳ ಗದಗ, ಧಾರವಾಡ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ 2 ವರ್ಷಗಳಿಂದ ಪ್ರಾರಂಭವಾದ ರಾಕ್ ಗಾರ್ಡನ್ ಮಾದರಿಯ ಶ್ರೀ ವೀರಭದ್ರೇಶ್ವರ ಉದ್ಯಾನವನ ಆಗಮಿಸಿದ ಭಕ್ತರಿಗೆ ಆಕರ್ಷಣೀಯವಾಗಿದೆ.
ಕೊರ್ಲಹಳ್ಳಿ, ಮದಲಗಟ್ಟಿ ಹತ್ತಿರವೂ ಪುಣ್ಯಸ್ನಾನ: ಕೆಲವರು ತಾಲೂಕಿನ ಕೊರ್ಲಹಳ್ಳಿ ಪಕ್ಕದಲ್ಲಿರುವ ತುಂಗಭದ್ರಾ ನದಿಗೆ ತೆರೆಳಿ ಅಲ್ಲಿಯೇ ಪುಣ್ಯಸ್ನಾನ ಮಾಡಿ ನದಿಯ ಆಚೆಯ ದಂಡೆಯಲ್ಲಿರುವ ವಿಜಯನಗರ ಜಿಲ್ಲೆಯ ಮದಲಗಟ್ಟಿ ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಊಟ ಮಾಡಿ ಹೋಗುತ್ತಾರೆ. ಕೆಲವುರು ಸಿಂಗಟಾಲೂರು ನಂತರ ಮದಲಗಟ್ಟಿಗೆ ಬಂದು ಆಂಜನೇಯನ ದರ್ಶನ ಪಡೆದುಕೊಂಡು ಹೋಗುವುದು ಸಹ ವಾಡಿಕೆಯಾಗಿದೆ. ಈ ಬಾರಿ ಇಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಪ್ರವಾಸಿಗರು ಸಿಂಗಟಾಲೂರು ಹತ್ತಿರವೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.ನಾವು ಕಳೆದ ಅನೇಕ ವರ್ಷಗಳಿಂದ ಕುಟುಂಬ ಸಮೇತರಾಗಿ ಸಿಂಗಟಾಲೂರಿಗೆ ಬಂದು ಹೋಗುತ್ತೇವೆ. ಇಲ್ಲಿಗೆ ಬರುವುದರಿಂದ ಸಂಕ್ರಾಂತಿಯ ಜತೆಗೆ ಶ್ರೀ ವೀರಭದ್ರ ದೇವರ ದರ್ಶವೂ ಆಗುತ್ತದೆ. ಇಲ್ಲಿಗೆ ವರ್ಷದಿಂದ ವರ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಈ ಬಾರಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದುದರಿಂದ ಪುಣ್ಯಸ್ನಾನ ಮಾಡುವವರಿಗೆ ಅನುಕೂಲವಾಗಿದೆ. ಶ್ರೀವೀರಭದ್ರೇಶ್ವರ ನೂತನ ದೇವಸ್ಥಾನ ಹಾಗೂ ಉದ್ಯಾನ ವನ ಈ ಸ್ಥಳದ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹರಪನಹಳ್ಳಿ ಪ್ರವಾಸಿಗ ಕೊಟ್ರಯ್ಯ ನಂದಿಬೇವೂರಮಠ ತಿಳಿಸಿದ್ದಾರೆ.