ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಉಜಿರೆ ವಲಯದ ವರ್ಷದ ವಿಶೇಷ ಯೋಜನೆಯಂತೆ ಮನೆ ಮನೆಗಳಲ್ಲಿ ಶುಕ್ಲ ಪಕ್ಷದ ಏಕಾದಶಿಯಂದು ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಮೂರನೇ ಸರಣಿ 21ರಂದು ಉಜಿರೆ ಓಡಲದ ವೈದಿಕ ಪುರೋಹಿತ ಚಂದ್ರಶೇಖರ ಬಳ್ಳಕ್ಕುರಾಯರ ಮನೆಯಲ್ಲಿ ನಡೆಯಿತು.
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಉಜಿರೆ ವಲಯದ ವರ್ಷದ ವಿಶೇಷ ಯೋಜನೆಯಂತೆ ಮನೆ ಮನೆಗಳಲ್ಲಿ ಶುಕ್ಲ ಪಕ್ಷದ ಏಕಾದಶಿಯಂದು ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಮೂರನೇ ಸರಣಿ 21ರಂದು ಉಜಿರೆ ಓಡಲದ ವೈದಿಕ ಪುರೋಹಿತ ಚಂದ್ರಶೇಖರ ಬಳ್ಳಕ್ಕುರಾಯರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಲಯ ಪ್ರಕಟಿಸಿದ ಶ್ರೀ ವಿಷ್ಣುಸಹಸ್ರನಾಮ ಕೃತಿಯನ್ನು ವಲಯದ ಪೂರ್ವಾಧ್ಯಕ್ಷ ಗಿರಿರಾಜ ಬಾರಿತ್ತಾಯ ಬಿಡುಗಡೆಗೊಳಿಸಿದರು. ವಲಯದ ವಿಪ್ರ ಬಾಂಧವರು ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣದಲ್ಲಿ ಭಾಗವಹಿಸಿದರು. ಬಳಿಕ ತಾಲೂಕು ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ಸತ್ಚಿಂತನೆಯ ಧಾರ್ಮಿಕ ವಿಚಾರ ಮಂಡಿಸಿದರು. ತಾಲೂಕು ಅಧ್ಯಕ್ಷ ಡಾ.ಗಿರೀಶ್, ಕಾರ್ಯದರ್ಶಿ ರಾಮಕೃಷ್ಣ ಭಟ್ ಕಾರ್ಯಕ್ರಮ ಆಯೋಜಿಸಿದ್ದರು. ನಂತರ ನಡೆದ ವಲಯದ ಸಭೆಯಲ್ಲಿ ಚರ್ಚಿಸಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮುಂದಿನ ಡಿಸೆಂಬರ್ 20 ರಂದು ವಲಯದ ವಾರ್ಷಿಕ ಮಹಾಸಭೆಯನ್ನು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಅಂದು ಬೆಳಿಗ್ಗೆ 9.ರಿಂದ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಉಜಿರೆ ವಲಯದ ವಿಪ್ರ ಬಾಂಧವರಿಂದ ವಿಷ್ಣು ಸಹಸ್ರ ನಾಮ ಪಾರಾಯಣ ಪೂರ್ವಕ ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ವಾರ್ಷಿಕ ಮಹಾಸಭೆ ನಡೆಸಿ ವಲಯದ ಸಮಾಜದ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದೆಂದು ತೀರ್ಮಾನಿಸಲಾಯಿತು. ತುಳು ಶಿವಳ್ಳಿ ಸಭಾದ ವಲಯದ ಸದಸ್ಯತ್ವ ಅಭಿಯಾನ ನಡೆಸುವುದು ಹಾಗೂ ಜನವರಿ ಕೊನೆಯ ವಾರದಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕರಾವಳಿಯ ಪ್ರವಾಸ ಏರ್ಪಡಿಸುವುದು ನಿರ್ಧರಿಸಲಾಯಿತು.