ಸಾರಾಂಶ
-ಕುಷ್ಠರೋಗ ವ್ಯಾಪಕ ಪತ್ತೆ ಕಾರ್ಯ ಕೈಗೊಳ್ಳಲು ಜಿಲ್ಲ್ಆಧಿಕಾರಿ ವೆಂಕಟೇಶ್ ಸೂಚನೆ
-----ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ನವೆಂಬರ್ 4 ರಿಂದ 21 ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಕುಷ್ಠರೋಗ ಪತ್ತೆ ಆಂದೋಲನದಲ್ಲಿ ಪ್ರತಿ ಮನೆ ಮನೆಗಳಿಗೂ ತೆರಳಿ ವ್ಯಾಪಕವಾಗಿ ಪತ್ತೆ ಕಾರ್ಯಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ-2024ರ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಪ್ಪದೇ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಬೇಕು. ವ್ಯಾಪಕ ಪ್ರಚಾರ ಕೈಗೊಳ್ಳೂವ ಮೂಲಕ ಕುಷ್ಠರೋಗ ಪತ್ತೆ ಆಂದೋಲನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಕಳಂಕ ಮನೋಭಾವವಿದೆ. ಆಂದೋಲನದ ವೇಳೆ ಜನರು ರೋಗದ ಬಗ್ಗೆ ಮುಚ್ಚಿಡುವ ಸಾಧ್ಯತೆ ಇರುತ್ತದೆ. ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ಪತ್ತೆ ಹಚ್ಚುವ ಕುರಿತು ತರಬೇತಿ ಕಾರ್ಯಗಾರ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 42 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ರೋಗ ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 2018-19 ರಿಂದ 2023-24ವರೆಗೆ ಒಟ್ಟು 421 ಕುಷ್ಠರೋಗ ಪ್ರಕರಣ ಕಂಡುಹಿಡಿಯಲಾಗಿದೆ. ನವೆಂಬರ್ 4 ರಿಂದ 21 ವರೆಗೆ ಜರುಗುವ ಆಂದೋಲನದಲ್ಲಿ ಜಿಲ್ಲೆಯಾದ್ಯಂತ 361358 ಮನೆಗಳ ಪತ್ತೇ ಸರ್ವೇ ಕೈಗೊಳ್ಳಲು ಗುರಿ ನಿಗದಿ ಮಾಡಲಾಗಿದೆ. ಇದಕ್ಕಾಗಿ 1291 ತಂಡಗಳ ಅಗತ್ಯವಿದ್ದು 2581 ತಂಡಗಳ ರಚನೆ ಮಾಡಲಾಗಿದೆ. ಈ ತಂಡಗಳ ಮೇಲೆ 129 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ನಾಗರಾಜ್ ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಜಿಲ್ಲಾ ಆರ್.ಸಿಹೆಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ರವೀಂದ್ರ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
-------------------ಪೋಟೋ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ-2024ರ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಡಿಸಿ ವೆಂಕಟೇಶ್ ಪೋಸ್ಟರ್ ಬಿಡುಗಡೆ ಮಾಡಿದರು.
17 ಸಿಟಿಡಿ 5