ನ. 15ರಂದು ಕಾರವಾರ ತಾಲೂಕು ಸಾಹಿತ್ಯ ಸಮ್ಮೇಳನ

| Published : Oct 19 2024, 12:17 AM IST

ಸಾರಾಂಶ

ಗುರುವಾರ ನಡೆದ ಕಸಾಪ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಸಮಿತಿಯು ಸರ್ವಾಧ್ಯಕ್ಷರಾಗಿ ಪ್ರೇಮಾ ಟಿ.ಎಂ ಆರ್. ಅವರನ್ನು ಆಯ್ಕೆ ಮಾಡಿದ ವರದಿಯನ್ನು ಮಂಡಿಸಿ, ಆಯ್ಕೆಗೆ ಪೂರಕವಾದ ಅಂಶಗಳನ್ನು ಸಭೆಗೆ ವಿವರಿಸಿತು.

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕು ಘಟಕದಿಂದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ. 15ರಂದು ಹಮ್ಮಿಕೊಂಡಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕವಿಯಿತ್ರಿ, ಕತೆಗಾರ್ತಿ, ಲೇಖಕಿ, ಅಂಕಣಗಾರ್ತಿ ಪ್ರೇಮಾ ಟಿ.ಎಂ.ಆರ್. ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ನಡೆದ ಕಸಾಪ ಕಾರ್ಯಕಾರಿ ಮಂಡಳಿ ಹಾಗೂ ಆಜೀವ ಸದಸ್ಯರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಗಾಗಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್‌ ಅವರ ಅಧ್ಯಕ್ಷತೆಯಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ರಚಿಸಲಾಗಿತ್ತು.

ಆಯ್ಕೆ ಸಮಿತಿ ಸಭೆ ಸೇರಿ ಬೇರೆ ಬೇರೆ ಕಸಾಪ ಸದಸ್ಯರು ಸೂಚಿಸಿದ ಹೆಸರುಗಳನ್ನು ಇಟ್ಟುಕೊಂಡು ಕೂಲಂಕಷವಾಗಿ ಚರ್ಚಿಸಿ ಅಂತಿವಾಗಿ ಮಹಿಳಾ ಸಾಹಿತಿ ಪ್ರೇಮ ಟಿ.ಎಂ.ಅರ್. ಅವರನ್ನು ಆಯ್ಕೆ ಮಾಡಿತ್ತು.ಗುರುವಾರ ನಡೆದ ಕಸಾಪ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಸಮಿತಿಯು ಸರ್ವಾಧ್ಯಕ್ಷರಾಗಿ ಪ್ರೇಮಾ ಟಿ.ಎಂ ಆರ್. ಅವರನ್ನು ಆಯ್ಕೆ ಮಾಡಿದ ವರದಿಯನ್ನು ಮಂಡಿಸಿ, ಆಯ್ಕೆಗೆ ಪೂರಕವಾದ ಅಂಶಗಳನ್ನು ಸಭೆಗೆ ವಿವರಿಸಿತು.

ಅಧ್ಯಕ್ಷ ರಾಮಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯು ಆಯ್ಕೆ ಸಮಿತಿ ಸಲ್ಲಿಸಿದ ವರದಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿತು.

ಅಂತಿಮವಾಗಿ ಪ್ರೇಮಾ ಟಿ.ಎಂ.ಆರ್. ಅವರ ಆಯ್ಕೆಯನ್ನು ಸರ್ವಾನುಮತದಿಂದ ಅನುಮೋದಿಸಿತು ಎಂದು ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರೇಮಾ ಟಿ.ಎಂ.ಆರ್. ಪರಿಚಯ ಕವಿಯತ್ರಿ, ಕಥೆಗಾರ್ತಿ, ಲೇಖಕಿ, ಅಂಕಣಕಾರ್ತಿ ಪ್ರೇಮಾ ಟಿ.ಎಂ.ಆರ್. ಹುಟ್ಟಿದ್ದು ಕುಮಟಾ ತಾಲೂಕಿನ ಕೂಜಳ್ಳಿಯ ಬೆಂಕಿಮನೆ ಎಂಬ ಕಲಾವಿದರ ಮನೆತನದಲ್ಲಿ. ಮಾದೇವಿ ಮತ್ತು ದೇವಪ್ಪ ನಾಯ್ಕ ಅವರ ಪುತ್ರಿ. ತಂದೆ ದೇವಪ್ಪ ಯಕ್ಷಗಾನ ಕಲಾವಿದರು. ದೊಡ್ಡಪ್ಪ ನಾರಾಯಣ ನಾಯ್ಕ ಯಕ್ಷಗಾನ ಭಾಗವತರು. ಅಣ್ಣ ಮೋಹನ ನಾಯ್ಕ ಕೂಜಳ್ಳಿ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದ ಮತ್ತು ಲೇಖಕ.ಬಾಳಸಂಗಾತಿ ಭಟ್ಕಳ ತಲಗೋಡು ಗ್ರಾಮದ ಟಿ.ಎಂ.ಆರ್. ನಾಯ್ಕ. ನಿವೃತ್ತ ಎಲ್ಐಸಿ ಅಭಿವೃದ್ಧಿ ಅಧಿಕಾರಿ. ಅಭಿಷೇಕ ಟಿ.ಎಂ.ಆರ್. ಏಕೈಕ ಮಗ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ ಪ್ರೇಮಾ ಈಗ ಪತಿಯೊಂದಿಗೆ ಕಾರವಾರ ಕಾಲರುದ್ರೇಶ್ವರ ದೇವಸ್ಥಾನ ಹತ್ತಿರದ ಚಿಂತನಗಂಗಾ ನಿವಾಸಿ. ಅವರ ವಿಲ್ಲು ಬರೆಯುತ್ತೇನೆ ಎಂಬ ಕವನ ಸಂಕಲನ ಪ್ರಕಟಗೊಂಡಿದೆ. ನಾಲ್ಕು ಲೇಖನಗಳ ಪುಸ್ತಕ, ಒಂದು ಕಥಾಸಂಕಲನ, ಎರಡು ಕವನ ಸಂಕಲನ, ಒಂದು ವಿಮರ್ಶಾ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ. ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ ಇವರು ಕಾರ್ಯಕ್ರಮ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದೂಸ್ಥಾನಿ ಸಂಗೀತವನ್ನುಅಭ್ಯಾಸ ಮಾಡುತ್ತಿದ್ದಾರೆ. ಇಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಶಿರಸಿ: ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಅ. ೧೯ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಆಯೋಜಿಸಲಾಗಿದೆ.ಶಾಸಕ ಭೀಮಣ್ಣ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪಾಲ್ಗೊಳ್ಳುವರು. ಸಭೆಯಲ್ಲಿ ಎಲ್ಲ ಅಧಿಕಾರಿಗಳು, ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.