3149 ಅಭ್ಯರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಆಫರ್‌ ಲೆಟರ್‌

| Published : Mar 10 2025, 12:22 AM IST

3149 ಅಭ್ಯರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಆಫರ್‌ ಲೆಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೇಳದಲ್ಲಿ 5821 ಜನರು ಸಂದರ್ಶನದಲ್ಲಿ ಭಾಗವಹಿಸಿದ್ದು, 3149 ಅಭ್ಯರ್ಥಿಗಳಿಗೆ ಆಫರ್‌ ಲೆಟರ್‌ ನೀಡಿದ್ದು, ಸ್ಥಳದಲ್ಲಿಯೇ 532 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಪಡೆದರು.

ಧಾರವಾಡ: ಜಿಲ್ಲಾಡಳಿತ ಕರ್ನಾಟಕ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದೆ. 5821 ಜನರು ಸಂದರ್ಶನದಲ್ಲಿ ಭಾಗವಹಿಸಿದ್ದು, 3149 ಅಭ್ಯರ್ಥಿಗಳಿಗೆ ಆಫರ್‌ ಲೆಟರ್‌ ನೀಡಿದ್ದು, ಸ್ಥಳದಲ್ಲಿಯೇ 532 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಪಡೆದರು.

ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡದ ವಿವಿಧ ಕೈಗಾರಿಕಾ ವಲಯಗಳಿಂದ ಸಂದರ್ಶನ ತೆಗೆದುಕೊಳ್ಳಲು ಆಗಮಿಸಿದ ಇನ್ಫೋಸಿಸ್, ಟಾಟಾ ಮಾರ್ಕೊಪೋಲೊ, ಟಾಟಾ ಮೋಟಾರ್ಸ್, ಎಕಸ್, ಯುಪ್ಲೇಕ್ಸ್, ಎಚ್.ಸಿ.ಎಲ್. ಟೆಕ್, ಸಾಯಿ ಗಾರ್ಮೆಂಟ್ಸ್, ಮೈಕ್ರೊ ಪಿನಿಷವಾಲ್, ಎಕ್ಸಲ್ ಪುಡ್ ಪ್ರೈ.ಲಿ., ಕ್ಯಾನನ್ ಇಂಟರನ್ಯಾಶನಲ್ ಸೇರಿದಂತೆ 130ಕ್ಕೂ ಹೆಚ್ಚು ಕೈಗಾರಿಕಾ ಕಂಪನಿಗಳಿಂದ ಆಗಮಿಸಿದ್ದ ಅಧಿಕಾರಿಗಳು ಅಭ್ಯರ್ಥಿಗಳನ್ನು ಸಂದರ್ಶಿಸಿದರು.

ವಿಕಲಚೇತನರಿಗೆ ಉದ್ಯೋಗದಲ್ಲಿ ಆದ್ಯತೆ ಸೀಗಬೇಕೆಂದು ಗೋಕಾಕ ಗ್ರಂಥಾಲಯದಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಸಂದರ್ಶನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಂಪನಿಗಳು 300ಕ್ಕೂ ಹೆಚ್ಚು ಜನರಿಗೆ ಸಂದರ್ಶನ ಮಾಡಿ, ದಾಖಲೆಗಳನ್ನು ಪಡೆದು, ಮುಂದಿನ ಹಂತಕ್ಕಾಗಿ ತಮ್ಮ ಕೈಗಾರಿಕಾ ಕಚೇರಿಗೆ ಬರಲು ಸುಮಾರು 80 ಜನ ವಿಕಲಚೇತನರಿಗೆ ನೇಮಕಾತಿ ಪತ್ರ ನೀಡಿದರು.

ಸರ್ಕಾರದ ನಿರ್ದೇಶನದಂತೆ ಉದ್ಯೋಗ ಮೇಳ ಆಯೋಜಿಸಿ, ನಿರುದ್ಯೋಗಿ ಅರ್ಹ ಯುವಕ, ಯುವತಿಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸುವ ಮತ್ತು ಅವಳಿ ನಗರಕ್ಕೆ ಆಗಮಿಸಿರುವ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಉದ್ಯಮಿಗಳಿಗೆ ಕೌಶಲ್ಯಯುತ ಮತ್ತು ಅಗತ್ಯ ಮಾನವ ಸಂಪನ್ಮೂಲ ನಮ್ಮ ಜಿಲ್ಲೆಯಲ್ಲಿ ಲಭ್ಯವಿದೆ ಎಂಬುದನ್ನು ತೋರಿಸಲಾಗಿದೆ. ಅವರಿಗೆ ಬಂಡವಾಳ ಹೂಡಿ, ಉದ್ಯೋಗ ಸೃಷ್ಟಿಸಬಹುದು ಎಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಉದ್ಯೋಗಮೇಳದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಕೌಶಲ್ಯಭರಿತ ಯುವ ಸಮೂಹವನ್ನು ತರಬೇತಿ ನೀಡಿ, ಸೃಷ್ಟಿಸುವ ಕೆಲಸ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕೊಡಿಸಲು ಮತ್ತು ಕೈಗಾರಿಕೆಗಳಿಗೆ ಸ್ಥಳೀಯವಾಗಿ ಮಾನವ ಸಂಪನ್ಮೂಲ ಪೂರೈಸಲು ಈ ಉದ್ಯೋಗಮೇಳ ಒಂದು ಉತ್ತಮ ವೇದಿಕೆ ಆಯಿತು ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.