ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ಗೌರವದಿಂದ ಕಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 108 ಆ್ಯಂಬುಲೆನ್ಸ್ ಸರ್ವೀಸ್ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿರುವುದರಿಂದ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿದರು.
ಆರೋಗ್ಯ ಎಲ್ಲರಿಗೂ ಮಹತ್ವದ್ದು. ಸಾರ್ವಜನಿಕರಿಂದ ತಾಲೂಕು ಕಚೇರಿ ಹಾಗೂ ಆಸ್ಪತ್ರೆಯನ್ನು ಸರಿಮಾಡಿ ಎಂದು ದೂರುಗಳು ಬರುತ್ತಿವೆ. ಇಲಾಖೆ ಸಿಬ್ಬಂದಿಯನ್ನು ನಾನು ಬಹಳ ಗೌರವದಿಂದ ಕಾಣುತ್ತೇನೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಆಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆ ಸಮರ್ಪಕವಾಗಿಲ್ಲ. ಔಷಧಿಗಳನ್ನು ಹೊರಗೆ ಬರೆದು ಕೊಡಬೇಡಿ. ಸರ್ಕಾರವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡುತ್ತಿದೆ. ನಾನು ಸಹ ಶಾಸಕರ ಅನುದಾನ ನೀಡಿದ್ದೇನೆ. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿನ ಎಲ್ಲಾ ಖರೀದಿ ಪ್ರಕ್ರಿಯೆ ಸರ್ಕಾರದ ನಿಯಮಾವಳಿಯಂತೆ ನಡೆಯಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಮಾತನಾಡಿ, ಹೊರರೋಗಿಗಳ ನೋಂದಣಿಗೆ 5 ರಿಂದ 10ರು.ಗೆ ಏರಿಸಲು ಮನವಿ ಮಾಡಿದರು. ಆಸ್ಪತ್ರೆ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಲಾಗಿದೆ. ಹೊರಭಾಗದ ಸ್ವಚ್ಛತೆಗೆ ಪವರ್ ವೀಡರ್ ಖರೀದಿಸಲಾಗಿದೆ ಎಂದರು.ಡಾ.ಶಿವಕುಮಾರ್ ವಿರುದ್ಧ ದೂರು: ಡಾ.ಶಿವಕುಮಾರ್ ಆಡಳಿತ ವೈದ್ಯಾಧಿಕಾರಿಯಾಗಿದ್ದ ವೇಳೆ ಸಿಸಿ ಕ್ಯಾಮೆರಾ, ಹೊರ ಚೀಟಿ ಬಿಲ್ ಹಣ ಎರಡುವರೆ ಲಕ್ಷ ರು. ಕಾಮಗಾರಿಗೆ ಬಿಲ್ ಮಾಡಿಕೊಡದೇ ಬೇರೆ ಪೂರೈಕೆದಾರರಿಗೆ ನೀಡಿ ವಂಚಿಸಿ, ಹಣ ದುರುಪಯೋಗಿಸಿಕೊಂಡಿರುವುದಾಗಿ ಗುತ್ತಿಗೆದಾರರಾದ ಪ್ರೀತಂ ಹಾಗೂ ವೀರಪ್ಪ ಶಾಸಕರಿಗೆ ದೂರು ನೀಡಿದರು.
ರಕ್ಷಾ ಸಮಿತಿ ಸದಸ್ಯೆ ರೇಖಾ ಮಾತನಾಡಿ, ಡಾ.ಶಿವಕುಮಾರ್ ಶಾಸಕರ ಮತ್ತು ಇತರೆ ಸಭೆಗಳಿಗೆ ಹಾಜರಾಗದೇ ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ಸಭೆಯಲ್ಲಿ ನೋಟಿಸ್ ನೀಡುವಂತೆ ಸೂಚಿಸಲಾಗಿತ್ತು. ಇಷ್ಟಾದರೂ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.ಈ ವೇಳೆ ಶಾಸಕ ಮಂಜು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್‌ಗೆ ಮೊಬೈಲ್ ಕರೆ ಮಾಡಿ ಡಾ.ಶಿವಕುಮಾರ್ ಕರ್ತವ್ಯ ಲೋಪದ ಬಗ್ಗೆ ಹಾಗೂ ಅವರ ಅಡಳಿತದ ಅವಧಿಯಲ್ಲಿ ಆಗಿರುವ ಹಣಕಾಸಿನ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳಿವೆ. ಅವರ ಬಗ್ಗೆ ಅವಧಿಯಲ್ಲಿನ ಎಲ್ಲಾ ವ್ಯವಹಾರವನ್ನು ತನಿಖೆ ಮಾಡಿ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.
ರಕ್ಷಾ ಸಮಿತಿ ಸದಸ್ಯರಾದ ರವಿಕುಮಾರ್, ಕಲ್ಪನಾ ಬಲದೇವ್, ರೇಖಾ ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ತಾಪಂ ಯೋಜನಾಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯ ಗಿರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಕೊರಟೀಕೆರೆ ದಿನೇಶ್, ಡಾ.ಜಯಪ್ರಕಾಶ್, ಡಾ.ಶ್ರೀಕಾಂತ್, ಡಾ.ಗಿರೀಶ್, ಡಾ.ದರ್ಶನ್, ಡಾ.ಪುಟ್ಟಸ್ವಾಮಿ, ಶಾಸಕರ ಆಪ್ತ ಸಹಾಯಕರಾದ ಪ್ರತಾಪ್, ಕುಮಾರಸ್ವಾಮಿ ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))