ಮಹಿಳೆಯರಿಂದ ಬಾಗಿನ ಅರ್ಪಣೆ

| Published : Aug 29 2025, 01:00 AM IST

ಸಾರಾಂಶ

ಹಾಸನ ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ನೂರಾರು ಮಹಿಳೆಯರು ದೇವಾಲಯಕ್ಕೆ ತೆರಳಿ ಗೌರಿ ಮಡಿಲಿಗೆ ಬಾಗಿನ ಅರ್ಪಿಸಿ, ಭಕ್ತಿಭಾವದಿಂದ ಹಬ್ಬವನ್ನು ಆಚರಿಸಿದರು. ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಆರತಿ ಮತ್ತು ಪ್ರಸಾದ ವಿತರಿಸಲಾಯಿತು. ಬಾಗಿನ ಅರ್ಪಣೆಗಾಗಿ ಉದ್ದವಾದ ಸಾಲು ನಿರ್ಮಾಣವಾಗಿದ್ದು, ದಿನವಿಡೀ ಭಕ್ತರ ಸಂಚಾರ ಕಂಡುಬಂತು.

ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ನೂರಾರು ಮಹಿಳೆಯರು ದೇವಾಲಯಕ್ಕೆ ತೆರಳಿ ಗೌರಿ ಮಡಿಲಿಗೆ ಬಾಗಿನ ಅರ್ಪಿಸಿ, ಭಕ್ತಿಭಾವದಿಂದ ಹಬ್ಬವನ್ನು ಆಚರಿಸಿದರು.

ಬೆಳಗಿನ ಜಾವದಿಂದಲೇ ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣದಲ್ಲಿ ದೇವಾಲಯದತ್ತ ಹರಿದುಬಂದರು. ಬಾಗಿನದಲ್ಲಿ ಅಕ್ಕಿ, ಹಣ್ಣು, ಸಕ್ಕರೆಕಡ್ಡಿ, ಅರಿಶಿನ-ಕುಂಕುಮ, ಸೀರೆಯೊಂದಿಗೆ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಚಿಹ್ನೆಗಳನ್ನು ಅಲಂಕಾರಿಕವಾಗಿ ಇರಿಸಲಾಗಿತ್ತು. ಮಹಿಳೆಯರು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸಿ ಗೌರಿಯ ಪಾದಕ್ಕೆ ಬಾಗಿನ ಅರ್ಪಿಸುವ ಮೂಲಕ ಕುಟುಂಬದಲ್ಲಿ ಐಶ್ವರ್ಯ, ಸಮೃದ್ಧಿ ಮತ್ತು ಸೌಖ್ಯ ನೆಲೆಸಲಿ ಎಂಬ ಭಾವನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹಲವಾರು ಮಹಿಳೆಯರು ದೇವರ ನಾಮಸ್ಮರಣೆ ಮಾಡಿ, ಭಜನೆಗಳನ್ನು ಹಾಡಿದರು. ಮಹಿಳೆಯರ ಗಾನದಿಂದ ದೇವಾಲಯದ ಆವರಣವೇ ಭಕ್ತಿರಸಮಯವಾಗಿ ಪರಿವರ್ತನೆಯಾಯಿತು. ಹಿರಿಯರಿಂದ ಹಿಡಿದು ಯುವತಿಯರ ವರೆಗೂ ಎಲ್ಲರೂ ಸಮಾನ ಉತ್ಸಾಹದಲ್ಲಿ ಪಾಲ್ಗೊಂಡಿದ್ದ ದೃಶ್ಯ ಮನ ಸೆಳೆಯಿತು. ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಆರತಿ ಮತ್ತು ಪ್ರಸಾದ ವಿತರಿಸಲಾಯಿತು. ಬಾಗಿನ ಅರ್ಪಣೆಗಾಗಿ ಉದ್ದವಾದ ಸಾಲು ನಿರ್ಮಾಣವಾಗಿದ್ದು, ದಿನವಿಡೀ ಭಕ್ತರ ಸಂಚಾರ ಕಂಡುಬಂತು.

ಬಾಗಿನ ಅರ್ಪಿಸಲು ಆಗಮಿಸಿದ್ದ ಶಾಂತಮ್ಮ ಮಾತನಾಡಿ, ಇವರ ಅಭಿಪ್ರಾಯದಲ್ಲಿ, ಇಂತಹ ಸಮೂಹ ಬಾಗಿನ ಅರ್ಪಣೆ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗಳಷ್ಟೇ ಅಲ್ಲದೆ, ಮಹಿಳೆಯರ ಒಗ್ಗಟ್ಟಿಗೆ ಹಾಗೂ ಸಾಂಸ್ಕೃತಿಕ ಪರಂಪರೆ ಉಳಿಸುವ ನಿಟ್ಟಿಗೂ ಮಹತ್ವದ್ದಾಗಿವೆ ಎಂದು ತಿಳಿಸಿದರು. ನಂತರ ಅರ್ಚಕರಾದ ಮಲ್ಲಯ್ಯ ಮಾತನಾಡಿ, ಪ್ರತಿ ವರ್ಷ ಈ ಗೌರಿ-ಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಗೌರಮ್ಮ ಹಿಂದಿನ ದಿನ ಕೈಲಾಸದಿಂದ ಬರುವುದರಿಂದ ಈ ಪೂಜೆ ಅತ್ಯಂತ ಮಹತ್ವವಾಗಿದೆ ಎಂದರು.