ಪವಿತ್ರ ಶ್ರಾವಣ ಮಾಸದಲ್ಲಿ ನಮ್ಮ ಜೀವನಾಡಿಗಳಾದ ನದಿ-ಕೆರೆ ಜಲಸಂಪತ್ತಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಪರಂಪರೆಯ ಪ್ರತೀಕವಾಗಿ ತಾಲೂಕು ಪಂಚಮಸಾಲಿ ಘಟಕದ ವತಿಯಿಂದ ಮದಗದ ಕೆಂಚಮ್ಮದೇವಿಗೆ ಬಾಗಿನ ಅರ್ಪಣೆ ಮಾಡಿರುವುದು ಅತ್ಯಂತ ಸಮಯೋಚಿತವಾದದ್ದು ಎಂದು ಪಂಚಮಸಾಲಿ ಜಗದ್ಗುರು ಹರಿಹರ ಪೀಠದ ವಚನಾನಂದ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ರಟ್ಟಿಹಳ್ಳಿ: ಪವಿತ್ರ ಶ್ರಾವಣ ಮಾಸದಲ್ಲಿ ನಮ್ಮ ಜೀವನಾಡಿಗಳಾದ ನದಿ-ಕೆರೆ ಜಲಸಂಪತ್ತಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಪರಂಪರೆಯ ಪ್ರತೀಕವಾಗಿ ತಾಲೂಕು ಪಂಚಮಸಾಲಿ ಘಟಕದ ವತಿಯಿಂದ ಮದಗದ ಕೆಂಚಮ್ಮದೇವಿಗೆ ಬಾಗಿನ ಅರ್ಪಣೆ ಮಾಡಿರುವುದು ಅತ್ಯಂತ ಸಮಯೋಚಿತವಾದದ್ದು ಎಂದು ಪಂಚಮಸಾಲಿ ಜಗದ್ಗುರು ಹರಿಹರ ಪೀಠದ ವಚನಾನಂದ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮದಗ ಮಾಸೂರಿನ ಮದಗದ ಕೆಂಚಮ್ಮ ದೇವಿಗೆ ವೀರಶೈವ ಲಿಂಗಾಯತ್ ಪಂಚಮಸಾಲಿ ರಟ್ಟಿಹಳ್ಳಿ-ಹಿರೇಕೆರೂರು ತಾಲೂಕು ಘಟಕ ಹಾಗೂ ಶಿಕಾರಿಪುರ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ವರ್ಷ ಸಕಾಲದಲ್ಲಿ ಮಳೆಯಾಗದೇ ರೈತ ಸಮುದಾಯ ಸಂಕಷ್ಟದಲ್ಲಿದ್ದು, ನಮ್ಮನ್ನಾಳುವ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದದ್ದು ಮನೋಧರ್ಮ. ಆ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ ನೇತೃತ್ವದ ಸರಕಾರ ಈ ಕೂಡಲೇ ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೆರೆ-ಕಟ್ಟೆಗಳು ತುಂಬಿದರೆ ರೈತರ ಬದುಕು ಹಸಿರಾಗುವುದು, ನಾಡಿನ ಹೊಲಗಳು ಸಮೃದ್ಧಿಯಾದರೆ ಪ್ರತಿಯೊಂದು ಮನ-ಮನೆಗಳಲ್ಲಿ ಸಂತೋಷ ಶಾಂತಿ ನೆಲೆಸುವುದು. ಜಲವನ್ನು ಪೂಜಿಸಿದರೆ ಜೀವನವನ್ನೇ ಪೂಜಿಸುವಂತಾಗುವುದು, ಕೆರೆ ಉಳಿದರೆ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಗ್ರಾಮ ಉಳಿಯುತ್ತದೆ. ಗ್ರಾಮ ಉಳಿದರೆ ನಾಡು ಸಮೃದ್ದಿಯಾಗಲಿದೆ ಎಂಬ ಮನೋಭಾವದಿಂದ ಇಂದು ವೀರಶೈವ ಲಿಂಗಾಯತ್ ಪಂಚಮಸಾಲಿ ವತಿಯಿಂದ ಬಾಗಿನ ಅರ್ಪಣೆ ಮಾಡಿ ಮದಗದ ಕೆಂಚಮ್ಮನಲ್ಲಿ ನಾಡು ನುಡಿ ಸಮೃದ್ಧವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದರು.ಅಸಮರ್ಪಕ ಮಳೆಯಿಂದಾಗಿ ಕೈಗೆ ಬಂದ ಬೆಳೆಗಳು ಬಿಸಿಲಿನ ತಾಪಮಾನಕ್ಕೆ ಒಣಗುತ್ತಿದ್ದು, ತಾಲೂಕಿನ ಕೆರೆ-ಕಟ್ಟೆಗಳು ಬರಿದಾಗುತ್ತಿವೆ. ಆದ್ದರಿಂದ ಸರಕಾರ ತಕ್ಷಣ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ತಿಪ್ಪಾಯಿಕೊಪ್ಪ ಮಠದ ಪೀಠಾಧಿಪತಿ ಮಹಾಂತಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾಜದ ತಾಲೂಕಾಧ್ಯಕ್ಷ ಪರಮೇಶಪ್ಪ ಹಲಗೇರಿ, ಎಂ.ಎಂ. ಹುಲ್ಮನಿ, ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಸಾಹಿತಿ ನಿಂಗಪ್ಪ ಚಳಗೇರಿ, ಶಿವಾನಂದ ಪಾಟೀಲ್, ಕಾಂತೇಶ ಪಾಟೀಲ್, ಕಾವ್ಯ ಪಾಟೀಲ್, ರಾಜೇಶ್ವರಿ ಹರವಿಶೆಟ್ಟರ್, ಬಸಮ್ಮ ಅಬಲೂರ, ಎಸ್.ಆರ್. ಅಂಗಡಿ, ರವೀಂದ್ರ ಹರವಿಶೆಟ್ಟರ, ರಾಜುಗೌಡ ಪಾಟೀಲ್, ಶಿವಾನಂದ ಪೂಜಾರ, ಕಂಠಾಧರ ಅಂಗಡಿ, ಮಲ್ಲಿಕಾರ್ಜುನ್ ಪೂಜಾರ, ನೀಲಮ್ಮ ಹೊಸಮನಿ, ಶೋಭಾ ಅಂಗಡಿ, ಎಂ.ಎಸ್. ಶಿವರಾಜ, ಈರಣ್ಣ ಕುಪ್ಪೆಲೂರ, ಅಶೋಕ ಗೋಪನಾಳ, ಸಿದ್ದಣ್ಣ ಚಿಕ್ಕಬಿದರಿ, ವಿಜಯಕುಮಾರ ಇಸೂರ, ರುದ್ರಗೌಡ ಕಣವಿಮನೆ, ಆರ್.ಎಸ್. ಪಾಟೀಲ್, ಕುಮಾರ ಬಣಕಾರ, ಗಿರೀಶ ಪೂಜಾರ ಹಾಗೂ ವಿವಿಧ ತಾಲೂಕಿನ ಸಮಾಜದ ಪದಾಧಿಕಾರಿಗಳು ಇದ್ದರು.