ಸಾರಾಂಶ
- ಕಳೆದ 14 ವರ್ಷಗಳಿಂದ ನಿತ್ಯವೂ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಅನ್ನ ಪ್ರಸಾದ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿರುವ 16ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ಅನ್ನ ಸಂತರ್ಪಣೆಗೆ ಭಕ್ತರಿಂದ ಅಪಾರ ಸಹಕಾರ ದೊರೆತು ಹೆಚ್ಚಿನ ಹೊರೆ ಕಾಣಿಕೆ ಸಮರ್ಪಣೆಯಾಗುತ್ತಿದೆ.
ನವರಾತ್ರಿ ದುರ್ಗಾದೇವಿ ಪೂಜಾ ಮಹೋತ್ಸವದಲ್ಲಿ ಕಳೆದ 14 ವರ್ಷಗಳಿಂದ ನಿತ್ಯವೂ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಅನ್ನ ಪ್ರಸಾದ ನೀಡಲಾಗುತ್ತಿದೆ. ವರ್ಷ ಕಳೆದಂತೆ ಪ್ರತಿನಿತ್ಯ ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ನವರಾತ್ರಿ ಉತ್ಸವದ 10 ದಿನಗಳ ಕಾಲ ಪ್ರತಿನಿತ್ಯ ಮಧ್ಯಾಹ್ನ 2000ಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಾಬರುತ್ತಿದೆ. ಭಕ್ತರ ಸಂಖ್ಯೆ ಎಷ್ಟೇ ಹೆಚ್ಚಾದರೂ ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಭಕ್ತರಿಗೆ ಅಚ್ಚುಕಟ್ಟಾಗಿ ಅನ್ನ ಪ್ರಸಾದ ಉಣ ಬಡಿಸುತ್ತಿದೆ.ಸಮಿತಿ ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸುಂದರ್ ಇಟ್ಟಿಗೆ ಸೇರಿದಂತೆ ಮುಂತಾದ ಪ್ರಮುಖರ ನೇತೃತ್ವದಲ್ಲಿ ಅನ್ನ ಸಂತರ್ಪಣಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ ಭಕ್ತರಿಗೆ ಅನ್ನ, ಸಾಂಬಾರ್, ಪಾಯಸ, ಪುಳಿಯೋಗರೆ, ಮಜ್ಜಿಗೆ, ಉಪ್ಪಿನಕಾಯಿ ಸೇರಿದಂತೆ ವಿಶೇಷ ದಿನಗಳಲ್ಲಿ ಹಣ್ಣಿನ ರಸಾಯನ, ಹೋಳಿಗೆ, ಬೂಂದಿ, ಜಿಲೇಬಿ, ಪಲ್ಯ ವಿವಿಧ ಸಿಹಿ ಖಾದ್ಯವನ್ನು ನೀಡುತ್ತಿದೆ.
ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ ಹೆಚ್ಚಿದಂತೆ ಈ ಕಾರ್ಯಕ್ಕೆ ಕೈ ಜೋಡಿಸುವವರು ಸಂಖ್ಯೆಯೂ ಹೆಚ್ಚಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ರೈತರು, ಜನ ಸಾಮಾನ್ಯರು ತಾವು ಮನೆಗಳಲ್ಲಿ ಬೆಳೆದ ಅಕ್ಕಿ, ತೆಂಗಿನಕಾಯಿ, ವಿವಿಧ ತರಕಾರಿಯನ್ನು ಸಂತಸದಿಂದ ತಂದು ಸೇವಾ ಕಾರ್ಯಕ್ಕೆ ಹೊರೆ ಕಾಣಿಕೆಯಾಗಿ ನೀಡುತ್ತಿದ್ದಾರೆ.ವಿಜಯದಶಮಿಯಂದು 15000 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಯಾವುದೇ ಗೊಂದಲ ನಡೆಯದಂತೆ ಸಮಿತಿ ಸದಸ್ಯರು ಅಚ್ಚುಕಟ್ಟಾಗಿ ಅನ್ನ ಪ್ರಸಾದ ವಿತರಣೆ ಕಾರ್ಯ ನಡೆಸುತ್ತಿದ್ದಾರೆ. ಅನ್ನ ಸಂತರ್ಪಣೆ ಕಾರ್ಯಕ್ಕೆ ಹಲವು ಸ್ವಯಂ ಸೇವಕರು ಸಹ ನಿತ್ಯ ಸ್ವಇಚ್ಛೆಯಿಂದ ಪಾಲ್ಗೊಂಡು ಭಕ್ತರಿಗೆ ಬಡಿಸುತ್ತಿದ್ದಾರೆ.
ಒಟ್ಟಾರೆ ನವರಾತ್ರಿ ಉತ್ಸವದ ಅನ್ನ ಸಂತರ್ಪಣೆ ಕಾರ್ಯ ವಿಶೇಷವಾಗಿ ಮುನ್ನಡೆದು ಭಕ್ತರ ಶ್ಲಾಘನೆಗೆ ಒಳಗಾಗಿದೆ. ೨೬ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ನವರಾತ್ರಿ ಮಹೋತ್ಸವದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿರುವ ಭಕ್ತರು.೨೬ಬಿಹೆಚ್‌ಆರ್ ೨:
ನವರಾತ್ರಿ ಉತ್ಸವದ ಅನ್ನ ಸಂತರ್ಪಣೆಗೆ ಬಂದಿರುವ ಹೊರೆ ಕಾಣಿಕೆ.