ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮಕ್ಕಳನ್ನು ದೇಶದ ಸದೃಢ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಯಾವುದೇ ಕ್ಷೇತ್ರದಲ್ಲಿ ಶಿಕ್ಷಕರ ಮಾರ್ಗದರ್ಶನವಿಲ್ಲದೇ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸಂಸದ ಸುನಿಲ್ ಬೋಸ್ ಅಭಿಪ್ರಾಯ ಪಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾಲೂಕು ಶಿಕ್ಷಕರ ಆಚರಣಾ ಸಮಿತಿ, ಹಾಗೂ ಪ್ರಾಥಮಿಕ, ಪ್ರೌಢಶಾಲಾ ಮತ್ತು ಎಲ್ಲ ವೃಂದ ಸಂಘಗಳ ವತಿಯಿಂದ ತಿರುಮಕೂಡಲಿನ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತದ ನೆಲದಲ್ಲಿ ಗುರು ಪರಂಪರೆಯು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಅಂತಹ ಗುರು ಪರಂಪರೆಯು ದೇಶದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಹೊರಹೊಮ್ಮಿಸುವಲ್ಲಿ ಸಹಕಾರಿಯಾಗಿದೆ.ಶಿಕ್ಷಕರಾದವರು ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಮಕ್ಕಳೇ ನಮ್ಮನ್ನು ಗೌರವಿಸುತ್ತಾರೆ. ಉತ್ತಮ ಬೋಧನೆ ನೀಡಿದರೆ ಮಕ್ಕಳ ಭವಿಷ್ಯ ಭದ್ರವಾಗುತ್ತದೆ ಎಂದರು.
ಶಿಕ್ಷಕ ಸಮುದಾಯದಲ್ಲೂ ಹಲವಾರು ಸಮಸ್ಯೆಗಳಿವೆ ಅವುಗಳನ್ನೆಲ್ಲ ಬದಿಗೊತ್ತಿ ಯಾವುದನ್ನೂ ತೋರ್ಪಡಿಸಿಕೊಳ್ಳದೇ ಮಕ್ಕಳ ಭವಿಷ್ಯ ರೂಪಿಸುವೆಡೆಗೆ ಆಲೋಚೀಸುವ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ. ನ್ಯಾಯಾಧೀಶರು ನ್ಯಾಯಕ್ಕಾಗಿ, ವೈದ್ಯರು ರೋಗಿಗಳ ಪ್ರಾಣ ಉಳಿಸಲು ಹೋರಾಟ ನಡೆಸಿದರೆ ಶಿಕ್ಷಕರು ರಾಷ್ಟ್ರಕ್ಕೆ ಉತ್ತಮ ಸಮಾಜ ರೂಪಿಸುವೆಡೆಗೆ ಗಮನಹರಿಸುತ್ತಾರೆ, ಹಾಗಾಗಿಯೇ ವ್ಯಕ್ತಿಯ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದು ಹೇಳಲಾಗುತ್ತದೆ, ಹಾಗಾದಾಗ ಮಾತ್ರವೇ ಯಾವುದೇ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸೋಸಲೆ ಗಂಗಾಧರ್ ಪ್ರಧಾನ ಭಾಷಣ ಮಾಡಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ. ಶಿವಶಂಕರ್ ಮೂರ್ತಿ, ಪುಟ್ಟಸ್ವಾಮಿ, ಬಿಆರ್.ಸಿ ನಾಗೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮರಿಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಎಚ್. ಗೋವಿಂದರಾಜು, ತಾಪಂ ಮಾಜಿ ಸದಸ್ಯರಾದ ಗಣೇಶ್, ನರಸಿಂಹ ಮಾದನಾಯಕ, ರಾಮಲಿಂಗಯ್ಯ ಇದ್ದರು.