ಅಧಿಕಾರಿ, ಸಿಬ್ಬಂದಿ ನಡೆ ವಿದ್ಯಾರ್ಥಿ ನಿಲಯದ ಕಡೆ

| Published : Nov 17 2024, 01:20 AM IST

ಸಾರಾಂಶ

ಪ್ರತಿ ತಿಂಗಳ 3ನೇ ಶನಿವಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಕಚೇರಿಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ “ಇಲಾಖೆಯ ಅಧಿಕಾರಿಗಳ, ಸಿಬ್ಬಂದಿ ನಡೆ ವಿದ್ಯಾರ್ಥಿ ನಿಲಯದ ಕಡೆ " ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಪ್ರತಿ ತಿಂಗಳ 3ನೇ ಶನಿವಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಕಚೇರಿಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಈ ತಿಂಗಳಲ್ಲಿ ಮೂರನೇ ಶನಿವಾರ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು 32 ಅಧಿಕಾರಿ, ಸಿಬ್ಬಂದಿ ವಿದ್ಯಾರ್ಥಿ ನಿಲಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಪೌಂಡ್, ಫೆನ್ಸಿಂಗ್ ಇದೆಯೇ? ಆವರಣದಲ್ಲಿ ಕೈ ತೋಟ, ಗಿಡಗಳನ್ನು ಬೆಳೆಸುತ್ತಿರುವ ಬಗ್ಗೆ, ಕಾಂಪೋಸ್ಟ್ ಗುಂಡಿ ಇರುವ ಬಗ್ಗೆ, ಕಟ್ಟಡದ ಸುತ್ತಲಿನ ವಾತಾವರಣ ಮಕ್ಕಳ ಸುರಕ್ಷತೆಗೆ ಪೂರಕವಾಗಿರವ ಬಗ್ಗೆ, ಕಟ್ಟಡಕ್ಕೆ ತಾಗಿಕೊಂಡು ನೀರಿನ ಗುಂಡಿ, ಕೋಳಚೆ ನೀರಿನ ಕಾಲುವೆ, ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ಲೈನ್‌ನ ಅಪಾಯ ಇಲ್ಲದಿರುವ ಬಗ್ಗೆ, ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರುವ ಬಗ್ಗೆ, ನಿಯಮಿತವಾಗಿ ನೀರಿನ ಸಂಪು, ಟ್ಯಾಂಕ್ ಸ್ವಚ್ಛಗೊಳಸಿರುವ ಬಗ್ಗೆ, ಸೊಳ್ಳೆಗಳು ಬಾರದಂತೆ ಕ್ರಮವಹಿಸುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಬೇಕಿದೆ.

ಶೌಚಾಲಯ ಮತ್ತು ಸ್ನಾನ ಗೃಹಗಳಲ್ಲಿ ಸ್ವಚ್ಛತೆ ಇರುವ ಬಗ್ಗೆ, ಉತ್ತಮ ಗುಣಮಟ್ಟದ ಹಾಸಿಗೆ, ದಿಂಬು ಹೊದಿಕೆ ನೀಡಿರುವ ಬಗ್ಗೆ, ಕಿಟಕಿಗಳಿಗೆ ಮೆಸ್ ಹಾಕಿರುವ ಬಗ್ಗೆ, ಕೊಠಡಿಯಲ್ಲಿ ಸಾಕಷ್ಟು ಗಾಳಿ ಬೆಳಕು ಇರುವ ಬಗ್ಗೆ ಮತ್ತು ಯುಪಿಎಸ್ ವ್ಯವಸ್ಥೆ ಇದ್ದು, ಕಟ್ಟಡದ ಸ್ಥಿತಿಗತಿ ಮತ್ತು ಪೇಟಿಂಗ್ ಬಗ್ಗೆ ಪರಿಶೀಲಿಸಬೇಕಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ರಾಜ್ಯಮಟ್ಟದಿಂದ ತಾಲೂಕು ಮಟ್ಟದ ವರೆಗಿನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ನಡೆ ವಿದ್ಯಾರ್ಥಿ ನಿಲಯದ ಕಡೆ ತಪ್ಪದೇ ಭಾಗವಹಿಸಿ ವರದಿ ನೀಡಬೇಕಿದೆ. ಆ ಮೂಲಕ ಹಾಸ್ಟೆಲ್‌ಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳ ದೈಹಿಕ ಮತ್ತು ಶೈಕ್ಷಣಿಕ ಸೇರಿದಂತೆ ಅವರ ಸರ್ವತೋಮುಖ ಬೆಳವಣಿಗೆಗೆ ಈ ಕಾರ್ಯಕ್ರಮ ಆಶಾ ಕಿರಣವಾಗಿ ಮೂಡಿದೆ.