ಕೆಲವು ಪ್ರಮುಖ ಇಲಾಖೆಯವರು ಕಾರಣವಿಲ್ಲದೇ ಸಭೆಗೆ ಗೈರು ಉಳಿಯುತ್ತಾರೆ. ಗಂಭೀರ ಚರ್ಚೆ ನಡೆಯುತ್ತಿದ್ದರೂ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಸಭೆಯ ನಡವಳಿಕೆಗೆ ವಿರುದ್ಧವಾಗಿದೆ.

ಶಿರಹಟ್ಟಿ: ಇಲಾಖೆ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆದಾಗ ತಾಲೂಕು ಮಟ್ಟದ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಭೆ ಪ್ರಾರಂಭವಾದರೂ ಅಧಿಕಾರಿಗಳು ಹಾಜರಾಗುವುದಿಲ್ಲ. ಇದನ್ನು ಸಹಿಸಲು ಆಗದು ಎಂದು ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅಧಿಕಾರಿಗಳ ನಡೆ ಬಗ್ಗೆ ಬೇಸರ ಹೊರಹಾಕಿದರು.ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವು ಪ್ರಮುಖ ಇಲಾಖೆಯವರು ಕಾರಣವಿಲ್ಲದೇ ಸಭೆಗೆ ಗೈರು ಉಳಿಯುತ್ತಾರೆ. ಗಂಭೀರ ಚರ್ಚೆ ನಡೆಯುತ್ತಿದ್ದರೂ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಸಭೆಯ ನಡವಳಿಕೆಗೆ ವಿರುದ್ಧವಾಗಿದೆ ಎಂದರು.

ನಿರ್ಮಿತಿ ಕೇಂದ್ರಕ್ಕೆ ವಿವಿಧ ಕಾಮಗಾರಿ ಕೈಗೊಳ್ಳಲು ತಾಲೂಕು ಪಂಚಾಯಿತಿ ಅನುದಾನದಲ್ಲಿ ₹೧ ಕೋಟಿ ನೀಡಿದ್ದು, ಯಾವುದೇ ಕಾಮಗಾರಿ ಆರಂಭಿಸಿಲ್ಲ. ಕ್ರಿಯಾಯೋಜನೆಯಲ್ಲಿ ನೀಡಿದ ಮಾಹಿತಿ ಏನಾಗಿದೆ ಎಂಬುದನ್ನು ಕೇಳಲು ಅಧಿಕಾರಿಗಳು ಸಭೆಗೆ ಬಂದಿಲ್ಲ. ದೂರವಾಣಿ ಕರೆ ಮಾಡಿದರೂ ಸಭೆಗೆ ಬರುವುದಿಲ್ಲ ಎಂದರೆ ಏನರ್ಥ? ಈ ರೀತಿಯ ನಡವಳಿಕೆ ಸರಿ ಕಾಣುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಸಾಮಾನ್ಯ ಸಭೆಯಲ್ಲಿ ನಿಮ್ಮ ಇಲಾಖೆಗಳಲ್ಲಿ ಏನು ಕಾಮಗಾರಿಗಳು ಆಗಬೇಕು ಎನ್ನುವ ಬಗ್ಗೆ ಹಾಗೂ ಎಲ್ಲ ಬೇಕು ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ವಿಸ್ತೃತ ಚರ್ಚೆ ಮಾಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ. ನೀವು ನೀಡಿದ ಕ್ರಿಯಾಯೋಜನೆಯನ್ನೇ ಮತ್ತೆ ಮತ್ತೆ ಬದಲಾಯಿಸುವುದು ಎಷ್ಟು ಸರಿ। ನಿಮ್ಮಲ್ಲಿ ಸ್ಪಷ್ಟತೆ ಇಲ್ಲವೇ? ಹೀಗಾದರೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಯಾಗಿ ನಿಮ್ಮ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರೂ ಬೆಲೆ ಇಲ್ಲದಂತಗುತ್ತದೆ ಎಂದರು.ನೀವು ತಯಾರಿಸಿ ಅನುಮೋಧನೆಗೆ ಸಲ್ಲಿಸಿದ ಕ್ರಿಯಾಯೋಜನೆ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳೇ ಪ್ರಸ್ತಾವನೆ ಮಾಡಬೇಕು. ಸ್ಪಷ್ಟತೆ, ನಿಖರತೆ ಅಧಿಕಾರಿಗಳಲ್ಲಿ ಬರಬೇಕು. ಸೇವಾ ಅವಧಿಯಲ್ಲಿ ಆಪಾದನೆ ಸಹಜ. ಎದುರಿಸಿ ಕೆಲಸ ಮಾಡಬೇಕು. ಇಲ್ಲವಾದರೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನಿಡುವುದಿಲ್ಲ. ಒಂದುವೇಳೆ ಅನುದಾನ ಲ್ಯಾಪ್ಸ್ ಆದರೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದರು.ಬೇಸರ ವ್ಯಕ್ತಪಡಿಸಿದ ಅಧಿಕಾರಿ: ಕಳೆದ ಸೆ. ೨೦ರಂದು ನಿಮ್ಮ ಇಲಾಖೆಯ ಗುಮಾಸ್ತೆಯೊಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇಂತಹ ಕೆಲಸಕ್ಕೆ ಇಲಾಖೆ ಸಿಬ್ಬಂದಿ ಇಳಿಯಬಾರದು. ಇದು ಅತ್ಯಂತ ಬೇಸರದ ವಿಷಯ. ಇನ್ನು ಮುಂದೆ ಇಲಾಖೆಯಲ್ಲಿ ಶಿಕ್ಷಕರ ಕೆಲಸ ಏನೇ ಇದ್ದರೂ ಜವಾಬ್ದಾರಿಯಿಂದ ವಿಳಂಬ ಮಾಡದೇ ಮಾಡಿಕೊಡಬೇಕು ಎಂದರು.ನಿಮ್ಮ ಇಲಾಖೆಯ ಮೇಲ್ವಿಚಾರಕರು ಶಿಕ್ಷಕರ ಯಾವ ಕೆಲಸ ಬಾಕಿ ಇದೆ ಎನ್ನುವ ಕುರಿತು ಪರಿಶೀಲನೆ ಮಾಡಬೇಕು. ನಂತರ ನಿಮಗೆ ವರದಿ ಸಲ್ಲಿಸುವ ಹಾಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾವುದೇ ಸಿಬ್ಬಂದಿಗೂ ತೊಂದರೆ ಕೊಡದಂತೆ ಅವರ ಕೆಲಸ ಕಾರ್ಯಗಳನ್ನು ಬೇಗ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇನ್ನು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.ತಾಲೂಕಿನ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇದ್ದರೆ, ಶಾಲಾ ಕೊಠಡಿಗಳ ದುರಸ್ತಿ ಕಾರ್ಯವಿದ್ದರೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ಕಲ್ಲಾಗನೂರ ಶಾಲೆಯಲ್ಲಿ ರಂಗಮಂದಿರ ಬೇಕು ಎಂದು ಸಲ್ಲಿಸಿರುವುದು ಸರಿಯಲ್ಲ. ಇದಕ್ಕೆ ಅನುಮೋಧನೆ ನೀಡಲು ಬರುವುದಿಲ್ಲ. ಮೇಲಾಗಿ ಒಂದೇ ಶಾಲೆಯಲ್ಲಿ ಒಂದೇ ಕಾಮಗಾರಿಗೆ ಅನುಮೋಧನೆ ನೀಡುವಂತೆ ಕ್ರಿಯಾಯಜನೆ ನೀಡಿದ್ದು, ಇದನ್ನು ನೀವೇ ಪರಿಶೀಲಿಸಿ ಮತ್ತೊಮ್ಮೆ ಸಿದ್ಧಪಡಿಸಿ ಕೊಡಬೇಕು ಎಂದರು.ಉಳಿದಂತೆ ವಿವಿಧ ಇಲಾಖೆಗಳ ಮೇಲೆ ಚರ್ಚೆ ನಡೆಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.