ಅಧಿಕಾರಿಗಳು, ಸಿಬ್ಬಂದಿ ಮನಭಾವ ಬದಲಾಗಬೇಕು: ಜಿಲ್ಲಾಧಿಕಾರಿ

| Published : Nov 14 2024, 12:45 AM IST

ಸಾರಾಂಶ

ಕಂದಾಯ ಇಲಾಖೆಯಡಿ ಅಟಲ್ ಜನಸ್ನೇಹಿ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ೪೫ ರೀತಿಯ ಸೇವೆ ನೀಡುತ್ತೇವೆ. ಹಿಂದೆ ೨೬ ಸ್ಥಾನಕ್ಕಿಂತ ಮೇಲೆ ಹೋಗಿರಲಿಲ್ಲ. ತುಂಬಾ ಕಡಿಮೆ ಸೇವೆ ಹಾಗೂ ವಿಳಂಬವಾಗುತಿತ್ತು. ತಿಂಗಳಿಗೆ ಕೇವಲ ೨೦ ಸಾವಿರ ಮಂದಿಗೆ ಸೇವೆ ನೀಡಲಾಗುತಿತ್ತು. ಈಗ ೫೦ ಸಾವಿರ ಮಂದಿಗೆ ನೀಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕೆಲಸದ ಕಾರ್ಯವೈಖರಿ ಹಾಗೂ ಮನೋಭಾವ ಬದಲಾಯಿಸಿಕೊಂಡರೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತಗತಿಯಲ್ಲಿ ಕೊಡಬಹುದು. ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಬಹುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಂದಾಯ ಇಲಾಖೆ ಕಾರ್ಯಪ್ರಗತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬದಲಾದ ಕೆಪುಪಟ್ಟಿ ಧೋರಣೆ

ಅಧಿಕಾರಿಗಳು, ಸಿಬ್ಬಂದಿಯಲ್ಲಿ ಹಿಂದೆ ಇದ್ದ ಕೆಂಪು ಪಟ್ಟಿ ಧೋರಣೆ ಬದಲಾಗಿದೆ. ವಿವಿಧ ಸೇವೆ ನೀಡುವುದರಲ್ಲಿ ಕೊನೆಯ ಸ್ಥಾನದಲ್ಲಿದ್ದ ಜಿಲ್ಲೆ ಈಗ ಅಗ್ರಸ್ಥಾನಕ್ಕೆ ಬಂದಿದೆ. ಅದಕ್ಕಾಗಿ ಯಾರೊಬ್ಬರಿಗೂ ಷೋಕಾಸ್ ನೋಟಿಸ್ ಕೊಟ್ಟಿಲ್ಲ, ಒಬ್ಬರನ್ನೂ ಅಮಾನತುಗೊಳಿಸಿಲ್ಲ. ಆದರೆ, ಅವರಿಂದ ಒತ್ತಡ ಹಾಕಿ ಕೆಲಸ ತೆಗೆಸಿದ್ದೇನೆ ಎಂದು ಹೇಳಿದರು.

ಕಂದಾಯ ಇಲಾಖೆಯಡಿ ಅಟಲ್ ಜನಸ್ನೇಹಿ ಸೇವಾ ಕೇಂದ್ರದಲ್ಲಿ (ನಾಡಕಚೇರಿ/ನೆಮ್ಮದಿ ಕೇಂದ್ರ) ಸಾರ್ವಜನಿಕರಿಗೆ ೪೫ ರೀತಿಯ ಸೇವೆ ನೀಡುತ್ತೇವೆ. ಹಿಂದೆ ೨೬ ಸ್ಥಾನಕ್ಕಿಂತ ಮೇಲೆ ಹೋಗಿರಲಿಲ್ಲ. ತುಂಬಾ ಕಡಿಮೆ ಸೇವೆ ಹಾಗೂ ವಿಳಂಬವಾಗುತಿತ್ತು. ತಿಂಗಳಿಗೆ ಕೇವಲ ೨೦ ಸಾವಿರ ಮಂದಿಗೆ ಸೇವೆ ನೀಡಲಾಗುತಿತ್ತು. ಈಗ ೫೦ ಸಾವಿರ ಮಂದಿಗೆ ನೀಡುತ್ತಿದೆ ಎಂದರು.ಆರ್‌ಟಿಸಿಗೆ ಖಾತೆ ಜೋಡಣೆ

ಸಕಾಲ ಯೋಜನೆಯಡಿ ೬೦೦ ಸೇವೆಗಳಿದ್ದು, ೩೧ ಇಲಾಖೆಗಳು ಇದರಡಿ ಬರುತ್ತವೆ. ವಿಳಂಬವಿಲ್ಲದೆ ೮೦ ಸಾವಿರ ರೀತಿಯ ಸೇವೆಗಳನ್ನು ಸಕಾಲದಲ್ಲಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ (ರೈತರಿಗೆ ವರ್ಷಕ್ಕೆ ೬೦೦೦) ಯೋಜನೆಯಡಿ ಆರ್‌ಟಿಸಿಗೆ ಖಾತೆ ಜೋಡಣೆ ಶೇ.೭೦ ಆಗಿತ್ತು. ಈಗ ಈ ಯೋಜನೆಯಡಿ ಶೇ.೯೮ ಪ್ರಗತಿ ಆಗಿದ್ದು, ರೈತರ ಖಾತೆ ನೇರ ಹಣ ಹೋಗುತ್ತಿದೆ. ಫ್ರೂಟ್ಸ್ ಐಡಿ ಪರಿಷ್ಕೃತ ಮಾಡಿ ಎಲ್ಲಾ ರೈತರ ಖಾತೆ ಪರಿಷ್ಕೃತಗೊಳಿಸಲಾಗಿದೆ ಎಂದರು.

ಕೇಸ್‌ಗಳ ವಿಲೇವಾರಿ ದಾಖಲೆ

ಜಿಲ್ಲೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಕೋರ್ಟ್‌ನಲ್ಲಿ ಎಂಟು ಸಾವಿರ ಕೇಸ್ ಇದ್ದವು. ಉಪವಿಭಾಗಾಧಿಕಾರಿ ಕಚೇರಿಯಲ್ಲಿಯೇ ಐದು ಸಾವಿರ ಕೇಸ್‌ಗಳಿವೆ. ತಹಶೀಲ್ದಾರ್ ಕೋರ್ಟ್‌ನಲ್ಲೂ ಕೇಸ್ ಇವೆ. ಒಟ್ಟು ೧೯ ಸಾವಿರಲ್ಲಿ ಕೇಸ್‌ಗಳಲ್ಲಿ ೧೬ ಸಾವಿರ ಕೇಸ್‌ಗಳನ್ನು ಒಂದು ವರ್ಷದಲ್ಲಿ ವಿಲೇವಾರಿ ಮಾಡಲಾಗಿದೆ. ತಹಸೀಲ್ದಾರ್ ಕೋರ್ಟ್‌ನಲ್ಲಿ ಮೂರು ಸಾವಿರ ಕೇಸ್‌ಗಳಿದ್ದು ಹೆಚ್ಚುವರಿ ಇಬ್ಬರು ಉಪವಿಭಾಗಾಧಿಕಾರಿಗಳು ಬರಲಿದ್ದು, ಶೀಘ್ರದಲ್ಲೇ ವಿಲೇವಾರಿ ಮಾಡಲಿದ್ದೇವೆ ಎಂದರು.ಟೀಕೆಗೆ ಗಮನ ನೀಡುವುದಿಲ್ಲ

ರಾಜಕೀಯ ವ್ಯಕ್ತಿಗಳ ಟೀಕೆಗೆ ಪ್ರತಿಕ್ರಿಯಿಸಿ, ನಾನು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಕಾನೂನು ಬಾಹಿರ ಕೆಲಸ ಮಾಡದಂತೆ ಸಿಬ್ಬಂದಿಗೂ ಸೂಚಿಸಿದ್ದೇನೆ. ಪಕ್ಷಗಳು, ಸಂಘಟನೆ ಏನು ಹೇಳುತ್ತೇವೆ ಎಂಬುದಕ್ಕೆ ಗಮನ ಕೊಡಲ್ಲ ಎಂದು ಹೇಳಿದರು. ಸರ್ಕಾರಿ ಜಾಗದ ಖಾತೆ ವಕ್ಫ್ ಎಂದು ಜಿಲ್ಲೆಯಲ್ಲಿ ನಮೂದಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. ಯಾವುದೇ ರೈತರ ಜಮೀನನ್ನು ವಕ್ಫ್‌ಗೆ ನೀಡಿಲ್ಲ. ಮುದುವಾಡಿ ಸರ್ಕಾರಿ ಶಾಲೆಯದ್ದು ವಕ್ಫ್ ಜಾಗ. ಆದರೂ ಶಾಲೆಗೇ ಆರ್‌ಟಿಸಿ ಮಾಡಿಕೊಡಲಾಗಿದೆ ಎಂದು ಹೇಳಿದರು.