ಸಾರಾಂಶ
ಹುಬ್ಬಳ್ಳಿ:
ಜೈನ ಸಮುದಾಯದ ಶ್ರದ್ಧಾಕೇಂದ್ರವಾಗಿರುವ ತಾಲೂಕಿನ ವರೂರಿನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ 12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಜೀನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವಕ್ಕೆ ಬುಧವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧಿಕೃತ ಚಾಲನೆ ನೀಡಿದರು.ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, ಬದುಕಿ ಬದುಕಲು ಬಿಡಿ ಎಂಬ ಸಂದೇಶವನ್ನು ಅರಿಯಬೇಕು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕಲು ಹಕ್ಕಿದೆ. ನಮ್ಮಂತೆ ಅವರಿಗೂ ಸುಖಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಸಾಮಾನ್ಯ ಮಾನವ ಎಂದಿಗೂ ಸಂತನಾಗಲು ಸಾಧ್ಯವಿಲ್ಲ. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರಷ್ಟೇ ಸಂತರಾಗಲು ಸಾಧ್ಯ. ಆದರೆ, ಸಂತರ ಸಂಪರ್ಕಕ್ಕೆ ಬಂದು ಅವರ ತತ್ವಾದರ್ಶ ಮೈಗೂಡಿಸಿಕೊಂಡಾಗ ಮಾತ್ರ ಸಾಮಾನ್ಯ ಮಾನವನೂ ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಹೇಳಿದರು.11ನೇ ವಯಸ್ಸಿನಲ್ಲಿ ದೀಕ್ಷೆ, 17ನೇ ವಯಸ್ಸಿನಲ್ಲಿ ದಿಗಂಬರರಾಗಿ 27ರ ಪ್ರಾಯಕ್ಕೆ ಆಚಾರ್ಯರಾದ ಶ್ರೀಗುಣಧರ ನಂದಿ ಶ್ರೀಗಳು ಕೇವಲ ಆಧ್ಯಾತ್ಮಿಕವಾಗಿ ಮಾತ್ರ ಸಮಾಜವನ್ನು ಶ್ರೀಮಂತ ಮಾಡದೇ, ಬಡವರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವ ಮೂಲಕ ಭಗವಾನ್ ಮಹಾವೀರರ ಆಶಯದಂತೆ ಬದುಕುತ್ತಿದ್ದಾರೆ. ತೀರ್ಥಕರರು ಹಾಕಿಕೊಟ್ಟ ಸತ್ಯ, ಅಹಿಂಸಾ, ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲ ಜೈನ ಮುನಿಗಳು ವಿಶ್ವ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ಹೀಗಾಗಿಯೇ ನನ್ನ ಮೊಮ್ಮಕ್ಕಳು ಜೈನ ಧರ್ಮವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರು.
ತೀಥಂಕರರು ಮಾನವ ಕಲ್ಯಾಣಕ್ಕಾಗಿಯೇ ಜನಿಸಿದ ದೇವರಾಗಿದ್ದಾರೆ. ಇಂತಹ ಮಹಾನ್ ಕಾರ್ಯಕ್ರಮದಲ್ಲಿ ಅವರ ಸ್ಮರಣೆಯ ಜತೆಗೆ ನಾಡಿನ ವಿವಿಧ ಜೈನ ಮುನಿಗಳ ದರ್ಶನ ಭಾಗ್ಯ ದೊರೆತಿರುವುದು ನನ್ನ ಭಾಗ್ಯ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು.ದಿಗಂಬರ ಜೈನ ಪಂಥದ ಮಹಾಗುರು ಆಚಾರ್ಯ ಶ್ರೀಗುರುದೇವ ಕುಂತುಸಾಗರ್ ಮಾಹಾರಾಜರು ಮಾತನಾಡಿ, ಯಾರಿಗೆ ಗುರುವಿನ ಆಶೀರ್ವಾದ ಇರುತ್ತದೆಯೋ ಅಂತಹವರಿಗೆ ಜೀವನದಲ್ಲಿ ಕಷ್ಟ, ಕಾರ್ಪಣ್ಯಗಳು ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಗುರುವಿನ ಆಶೀರ್ವಾದ ಅಗತ್ಯವಾಗಿದೆ ಎಂದರು.
ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, ಕರ್ನಾಟಕ ಶಾಂತಿಯ ನೆಲೆಬೀಡು. ಇಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ನಾವು ಜನಿಸಿದ ಕ್ಷೇತ್ರವನ್ನೇ ಜಗತ್ ವಿಖ್ಯಾತಗೊಳಿಸಬೇಕು ಎಂಬ ಕಾರಣಕ್ಕೆ ದೇಶಾದ್ಯಂತ ಭಿಕ್ಷೆ ಬೇಡುವ ಮೂಲಕ ಈ ಸುಮೇರು ಪರ್ವತ ನಿರ್ಮಿಸಲಾಗಿದೆ. 12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ವಿಶ್ವ ದಾಖಲೆ ಸೃಷ್ಟಿಸಬಲ್ಲ 405 ಅಡಿ ಎತ್ತರದ ಸುಮೇರು ಪರ್ವತ ನಿರ್ಮಿಸುವ ಮೂಲಕ ಶ್ರೀ ಗುಣಧರ ನಂದಿ ಮಹಾರಾಜರು ಅಮೋಘ ಸಾಧನೆ ಮಾಡಿದ್ದಾರೆ. ಎಂದರು.
ಶಾಸಕರಾದ ಎಂ.ಆರ್. ಪಾಟೀಲ, ಪ್ರಸಾದ ಅಬ್ಬಯ್ಯ ಮಾತನಾಡಿದರು. ಇದೇ ವೇಳೆ ಸುಮೇರು ಪರ್ವತ ನಿರ್ಮಿಸಿದ ಎಂಜಿನಿಯರ್ ವಿನೋದ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ನಟ ರಮೇಶ ಅರವಿಂದ, ಮುಖಂಡ ಮಹೇಂದ್ರ ಸಿಂಘಿ, ವಿನೋದ ಜೈನ್, ವಿಮಲ್ ತಾಳಿಕೋಟಿ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 15 ಆಚಾರ್ಯರು, ನೂರಾರು ಸಂತ ಮುನಿಗಳು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಮಾಂಸಾಹಾರ ನಿಷೇಧನಾನು ರಾಜ್ಯಪಾಲನಾಗಿ ಬಂದ ನಂತರ ರಾಜಭವನದಲ್ಲಿ ಮಾಂಸಹಾರ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇನೆ. ವಿದೇಶದಿಂದ ಬರುವ ಅತಿಥಿಗಳಿಗೂ ಮಾಂಸಾಹಾರದ ಬದಲಾಗಿ, ಸಸ್ಯಾಹಾರ ಸೇವನೆಗೆ ಮಾತ್ರ ಅವಕಾಶ ನೀಡುವ ಪದ್ಧತಿ ಅನುಸರಿಸಿಕೊಂಡು ಬಂದಿದ್ದೇವೆ. ಪ್ರತಿಯೊಬ್ಬರು ಸಸ್ಯಾಹಾರ ಸೇವನೆ ಮಾಡಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಕರೆ ನೀಡಿದರು.ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಕಾರ್ಯಕ್ರಮದ ಪೂರ್ವದಲ್ಲಿ ಆಚಾರ್ಯ ಗುಣದರನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ಬೆಳಗ್ಗೆ ಧರ್ಮ ಧ್ವಜಾರೋಹಣ, ಮಹಾ ಮಂಟಪ ಉದ್ಘಾಟನಾ ಕಾರ್ಯಕ್ರಮ, ಮುನಿಶ್ರೀಗಳಿಂದ ಪೂಜಾ ವಿಧಿ-ವಿಧಾನ ಕಾರ್ಯಕ್ರಮ ಹಾಗೂ ಮಹಾ ಮಂಡಳ ಆರಾಧನಾ ವಿಧಿ-ವಿಧಾನ ಸಮಾರಂಭ ನಡೆದವು. ಮಹಾ ಮಂಟಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.