ಜಾನಪದ ಸಮ್ಮೇಳನಾಧ್ಯಕ್ಷ ಟಿ.ನಿಂಗಪ್ಪವರಿಗೆ ಅಧಿಕೃತ ಆಹ್ವಾನ

| Published : Jan 29 2024, 01:38 AM IST

ಸಾರಾಂಶ

ಕರ್ನಾಟಕ ಜಾನಪದ ಪರಿಷತ್ತಿನಿಂದ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ನಡೆಯಲಿರುವ ತೃತೀಯ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರಂಗಕರ್ಮಿ ಟಿ.ನಿಂಗಪ್ಪವರಿಗೆ ಪರಿಷತ್ತಿನ ಪದಾಧಿಕಾರಿಗಳು ಭಾನುವಾರ ಅಧಿಕೃತ ಆಹ್ವಾನ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕರ್ನಾಟಕ ಜಾನಪದ ಪರಿಷತ್ತಿನಿಂದ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಫೆ.10ರಂದು ನಡೆಯಲಿರುವ ತೃತೀಯ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರಂಗಕರ್ಮಿ ಟಿ.ನಿಂಗಪ್ಪ ಅವರಿಗೆ ಪರಿಷತ್ತಿನ ಪದಾಧಿಕಾರಿಗಳು ಭಾನುವಾರ ಅಧಿಕೃತ ಆಹ್ವಾನ ನೀಡಿದರು.

ಸಮ್ಮೇಳನಾಧ್ಯಕ್ಷರ ಗಡಿಹಳ್ಳಿ ನಿವಾಸಕ್ಕೆ ಬೆಳಗ್ಗೆ ತೆರಳಿದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ನಿಂಗಪ್ಪ ಅವರನ್ನು ಸನ್ಮಾನಿಸಿ, ತಾಂಬೂಲ ನೀಡಿ ಸಮ್ಮೇಳನ ಯಶಸ್ವಿಗೊಳಿಸಿ ಕೊಡುವಂತೆ ಮನವಿ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಟಿ.ನಿಂಗಪ್ಪ ಅವರು ಜಾನಪದ ಹಾಡುಗಾರ, ಕಲಾವಿದ, ರಂಗಕರ್ಮಿಯಾಗಿ ನಾಡಿಗೆ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು. ಫೆ 10ರಂದು ನಡೆಯಲಿರುವ ಸಮ್ಮೇಳನದಲ್ಲಿ ವಿವಿಧ ಜಾನಪದ ಗೋಷ್ಠಿ, ಜಾನಪದ ಕಲಾವಿದರಿಗೆ ಗೌರವ ಸಮರ್ಪಣೆ, ಜಾನಪದ ಗೀತೆಗಳ ಗಾಯನ, ನೃತ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.

ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪರಿಷತ್ತಿನ ಅಜ್ಜಂಪುರ ತಾಲೂಕು ಅಧ್ಯಕ್ಷ ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕೃತಿ ಗೀಳಿನಿಂದ ಹೊರ ತರಬೇಕಾದರೆ ಇಂತಹ ಸಮ್ಮೇಳನಗಳು ಅತ್ಯಗತ್ಯ ಎಂದರು.

ಗ್ರಾಮದ ಮುಖಂಡ ಮಂಜಪ್ಪ ಮಾತನಾಡಿ, ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಗೌರವಾಧ್ಯಕ್ಷ ಮರುಳಸಿದ್ದಪ್ಪ, ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ, ಗ್ರಾಮದ ಮುಖಂಡರಾದ ಪರಮೇಶ್ವರಪ್ಪ, ಅಣ್ಣಯ್ಯ, ರಾಜಣ್ಣ ಉಪಸ್ಥಿತರಿದ್ದರು.