ಸಾರಾಂಶ
ಭಗವತ್ ಭಕ್ತರು ಪರಂಪರೆಯ ಮೌಲ್ಯವನ್ನು ಉಳಿಸುವುದರೊಂದಿಗೆ ಆಚರಣೆಗಳನ್ನೂ ಕಾರ್ಯರೂಪಕ್ಕೆ ತರಬೇಕು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸತ್ಕಾರ್ಯಗಳನ್ನು ಮಾಡುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಸೋಸಲೆ ಶ್ರೀವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.ಎಂಟನೇ ಚಾತುರ್ಮಾಸ ವ್ರತ ದೀಕ್ಷಾ ಅಂಗವಾಗಿ ಗುರುವಾರ ಸಂಜೆ ಸೋಸಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಪುರ ಪ್ರವೇಶ ಕಾರ್ಯಕ್ರಮ ಭವ್ಯ ಶೋಭಾ ಯಾತ್ರೆ ನಂತರ ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದಕ್ಷಿಣಾಯಣ ಪುಣ್ಯಕಾಲ ನಮ್ಮೆಲ್ಲ ಧಾರ್ಮಿಕ ವ್ರತ ನಿಯಮ ಆಹಾರ ಪದ್ಧತಿ ಮತ್ತು ಆರಾಧನೆಗೆ ಅತ್ಯಂತ ಸಕಾಲವಾದ ಸಂದರ್ಭ. ಈ ಕಾಲಘಟ್ಟದಲ್ಲಿ ಬರುವ ಚಾತುರ್ಮಾಸ್ಯ ವ್ರತವು ಸನಾತನ ಭಾರತೀಯ ಪರಂಪರೆಯಲ್ಲಿ ಬರುವ ಎಲ್ಲಾ ಕಟ್ಟುಪಾಡುಗಳನ್ನು, ಆಚರಣೆಗಳನ್ನು ಕಾರ್ಯರೂಪಕ್ಕೆ ತರುವ ಸುಸಂದರ್ಭವಾಗಿದೆ ಎಂದರು.ಭಗವತ್ ಭಕ್ತರು ಈ ಸಂದರ್ಭವನ್ನು ಬಳಸಿಕೊಂಡು ನಮ್ಮ ಪರಂಪರೆಯ ಮೌಲ್ಯವನ್ನು ಉಳಿಸುವುದರೊಂದಿಗೆ ಆಚರಣೆಗಳನ್ನೂ ಕಾರ್ಯರೂಪಕ್ಕೆ ತರಬೇಕು. ಇದು ಮಳೆಗಾಲವಾದ್ದರಿಂದ ಯತಿಗಳು ಒಂದೆಡೆ ಕುಳಿತು ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಾರೆ. ಅದರಂತೆಯೇ ಎಲ್ಲಾ ಗೃಹಸ್ಥರು, ಯುವಕರು ಮತ್ತು ಮಕ್ಕಳು ತಮ್ಮ ಕೈಲಾದಷ್ಟು ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.ಯಾವುದೇ ಉತ್ತಮ ಕೆಲಸಕ್ಕೆ ಶ್ರದ್ದೆ ಬಹು ಮುಖ್ಯ. ಧೈರ್ಯ ಅದಕ್ಕೆ ಚೈತನ್ಯ ಕೊಡುತ್ತದೆ. ಉಪನಿಷತ್ ಹೇಳಿದಂತೆ ನಾವು ಬದುಕಿದರೆ ಭಗವಂತನಿಗೂ ತೃಪ್ತಿ ಆಗುತ್ತದೆ. ಇದದನ್ನೇ ಸಮಾಜ ನಮ್ಮಿಂದ ಬಯಸುತ್ತದೆ ಎಂದರು.ವಿಧಾನಪರಿಷತ್ತು ಮಾಜಿ ಸದಸ್ಯ ಗೋ. ಮಧುಸೂದನ್ ಮಾತನಾಡಿ, ಆಧ್ಯಾತ್ಮಿಕ ಪರಂಪರೆ ಮತ್ತು ಶ್ರದ್ಧೆಗೆ ಸೀಮಿತವಾಗಿ ಬದುಕಿ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳುವವರು ಕೆಲವೇ ಜನ. ಅಂಥವರಲ್ಲಿ ಅಗ್ರಗಣ್ಯರಾದ ಸೋಸಲೆ ಮಠದ ಶ್ರೀಗಳು ವೈಯಕ್ತಿಕ ಬದುಕಿನ ಸಾಧನೆಯೊಂದಿಗೆ ಧಾರ್ಮಿಕ ಕ್ಷೇತ್ರಕ್ಕೂ ಮಹೋನ್ನತವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.ಹಿರಿಯ ವಿದ್ವಾಂಸ ಡಾ.ಸಿ. ಎಚ್. ಶ್ರೀನಿವಾಸಮೂರ್ತಿ, ಸೋಸಲೆ ವ್ಯಾಸರಾಜ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬದರಿನಾಥ, ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಖಜಾಂಚಿ ನಾಗೇಂದ್ರ, ವ್ಯಾಸರಾಜರ ಮಠದ ವ್ಯವಸ್ಥಾಪಕ ಶ್ರೀಧರ ಆಚಾರ್ಯ, ಬೆಂಗಳೂರಿನ ಸೋಸಲೆ ಮಠದ ಮಠಾಧಿಕಾರಿ ಪವಮಾನ ಆಚಾರ್ಯ ಕಂಬಾಲೂರು, ಟಿ. ನರಸೀಪುರ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ವಿದ್ವಾಂಸ ಮಾತರಿಶ್ವಾಚಾರ್ಯ, ಮಠದ ದಿವಾನರಾದ ಬ್ರಹ್ಮಣ್ಯ ಆಚಾರ್ಯ ಮೊದಲಾದವರು ಇದ್ದರು.
ಮೆರವಣಿಗೆ- ಪುರ ಪ್ರವೇಶಕಾರ್ಯಕ್ರಮಕ್ಕೆ ಮುನ್ನ ಬನ್ನೂರು ವೃತ್ತದಿಂದ ಸೋಸಲೆ ಮಠದವರೆಗೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪ್ರತಿಮೆ ಪಲ್ಲಕ್ಕಿ ಉತ್ಸವ, ವಿವಿಧ ಭಜನಾ ಮಂಡಳಿಗಳ ಮಾತೆಯರಿಂದ ದೇವರ ನಾಮ ಗಾಯನ, ವಿದ್ವಾಂಸರಿಂದ ವೇದಘೋಷ , ಶ್ರೀವ್ಯಾಸ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಂತ್ರಘೋಷ ಇತ್ಯಾದಿಗಳು ಗಮನ ಸೆಳೆದವು.