ಸಾರಾಂಶ
ಯಲ್ಲಾಪುರ: ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳು ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಶಾಸಕರ ಸೂಚನೆಯ ನಂತರವೂ ಗ್ರಾಮದೇವಿ ಜಾತ್ರಾ ಆಯವ್ಯಯ ಹಾಗೂ ಅಧ್ಯಕ್ಷರಿಲ್ಲದ ಸಮಯದಲ್ಲಿನ ೧೭ ತಿಂಗಳ ಆಯವ್ಯಯ ಮಾಹಿತಿಯನ್ನು ಸದಸ್ಯರಿಗೆ ನೀಡದೆ ಮರೆಮಾಚುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.ಅ. ೨೯ರಂದು ಪಪಂ ಸಭಾಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯು ಗದ್ದಲದಿಂದ ಕೂಡಿತ್ತು. ಸಭೆಯಲ್ಲಿ ಚರ್ಚಿಸಬೇಕಿದ್ದ ವಿಷಯಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡದೇ ಸಭೆ ನಡೆಸುತ್ತಿರುವುದರ ಕುರಿತು ಆರಂಭದಿಂದಲೇ ಸದಸ್ಯರು ಅಧಿಕಾರಿಗಳನ್ನು ದೂರಿದರು.ಜಾತ್ರೆ ಮುಗಿದು ಒಂದೂವರೆ ವರ್ಷ ಕಳೆದರೂ ಖರ್ಚುವೆಚ್ಚದ ಮಾಹಿತಿಯನ್ನು ನೀಡಿಲ್ಲ. ಜಾತ್ರಾ ಆಯವ್ಯಯ ಪಟ್ಟಿಯಲ್ಲಿ, ಸದಸ್ಯರ ಸಮ್ಮುಖದಲ್ಲಿ ಹರಾಜಾದ ಅಂಗಡಿಗಳ ಹೊರತು, ಹರಾಜಾದ ಜಾಗಗಳ ಮಾಹಿತಿ ಇಲ್ಲ. ಆಮ್ಯೂಸ್ಮೆಂಟ್ ಪಾರ್ಕ್‌ಗಳ ಹರಾಜು ಪ್ರಕ್ರಿಯೆಯ ಮಾಹಿತಿಯೂ ಇಲ್ಲ. ಅನುಮತಿ ಪಡೆಯಲು ಪಾವತಿಸಿದ ಹಣದ ಲೆಕ್ಕಾಚಾರ ಕೂಡ ದೊರೆತಿಲ್ಲ. ಇವೆಲ್ಲವನ್ನೂ ಸದಸ್ಯರಿಂದ ಮರೆಮಾಚಲಾಗಿರುವ ಕಾರಣ ತಿಳಿಯಬೇಕಿದೆ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ದೂರಿದರು.೧೭ ತಿಂಗಳ ಜಮಾ- ಖರ್ಚು ಮಾಹಿತಿ ಸದಸ್ಯರಿಗೆ ನೀಡದಂತೆ ಸರ್ಕಾರದ ಆದೇಶವಿದೆಯೇ? ಅಧಿಕಾರಿಗಳು ಕಾರಣವೇ? ಅಥವಾ ಮುಖ್ಯಾಧಿಕಾರಿಗಳೇ ನೀಡದಂತೆ ಸೂಚಿಸಿದಾರೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡದಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳನ್ನು ಕೇಳುತ್ತೇವೆ ಎಂದು ಸದಸ್ಯ ಸತೀಶ್ ನಾಯ್ಕ ತಿಳಿಸಿದರು. ಟೆಂಡರ್ ಪಡೆದ ಗುತ್ತಿಗೆದಾರರು ಕೆಲಸ ಆರಂಭಿಸದೇ ವಿಳಂಬ ಮಾಡುತ್ತಿದ್ದು, ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಹಿಂದೆ ಕೆಲಸ ಮಾಡದಂತಹ ಗುತ್ತಿಗೆದಾರರಿಗೆ ಮತ್ತೆ ಹೊಸ ಟೆಂಡರ್ ನೀಡದಂತೆ ಸದಸ್ಯರು ಆಗ್ರಹಿಸಿದರು. ಸಂತೆ ವ್ಯಾಪಾರಸ್ಥರಿಂದ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಟೆಂಡರ್ ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಭೆ ತಡವಾಗಿ ಆಯೋಜಿಸಿದ್ದು, ಸದಸ್ಯರಿಗೆ ಸಮಯ ನೀಡಬಾರದೆಂಬ ಕಾರಣಕ್ಕಾಗಿ ಈ ರೀತಿ ಸಮಯ ನಿಗದಿಪಡಿಸಲಾಗುತ್ತಿದೆ. ಜಾತ್ರಾ ಆಯವ್ಯಯಗಳ ಕುರಿತು ನಡೆಸಬೇಕಿದ್ದ ಸಭೆಯನ್ನು ವಿನಾಕಾರಣ ವಿಳಂಬಿಸುತ್ತಿದ್ದು, ಅದರಲ್ಲಿ ಹಗರಣ ನಡೆದಿರುವ ಶಂಕೆ ಮೂಡುತ್ತಿದೆ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ದೂರಿದರು.ಸಭೆಯಲ್ಲಿ ಪಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಸುನಿಲ್ ಗಾವಡೆ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.