ಹೂಲಗೇರಿ ಗ್ರಾಮದಲ್ಲಿ ಶನಿವಾರ ಬೀಳಗಿ ಕ್ಷೇತ್ರದ ಹೂಲಗೇರಿ ಗ್ರಾಪಂ ವ್ಯಾಪ್ತಿಯ ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಟಿ. ಪಾಟೀಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಪ್ರಜಾಸೇವೆ ಆಂದೋಲನ ಮಾಡುವ ಅವಶ್ಯಕತೆಯೇ ಇರಲಿಲ್ಲವೆಂದರು.
ಕನ್ನಡಪ್ರಭ ವಾರ್ತೆ ಕೆರೂರ
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಪ್ರಜಾಸೇವೆ ಆಂದೋಲನ ಮಾಡುವ ಅವಶ್ಯಕತೆಯೇ ಇರಲಿಲ್ಲವೆಂದು ಶಾಸಕ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು. ಹೂಲಗೇರಿ ಗ್ರಾಮದಲ್ಲಿ ಶನಿವಾರ ಬೀಳಗಿ ಕ್ಷೇತ್ರದ ಹೂಲಗೇರಿ ಗ್ರಾಪಂ ವ್ಯಾಪ್ತಿಯ ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬರುವ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ವಿಳಂಬ ಮಾಡದೆ ಅವರಿಗೆ ಪರಿಹಾರ ಕಲ್ಪಿಸಬೇಕು. ಅವರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು. ಸಾರ್ವಜನಿಕರ ದೂರವಾಣಿ ಸ್ವೀಕರಿಸದ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳನ್ನು ಅಮಾನತು ಮಾಡಲಾಗುವುದೆಂದರು.ನಿರ್ಲಕ್ಷ ಮಾಡಿದ ಅಧಿಕಾರಿಗಳ ವಿರುದ್ಧ ದಾಖಲೆಯೊಂದಿಗೆ ನಾಗರಿಕರು ದೂರು ಸಲ್ಲಿಸಿದರೆ ಅಂಥವರನ್ನು 24 ಗಂಟೆಯೊಳಗಾಗಿ ಅಮಾನತು ಮಾಡಲಾಗುವುದು. ಇದು ಚೇಷ್ಠೆ ಅಲ್ಲ ಅಧಿಕಾರಿಗಳು ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳಿಗೆ ಚಾಟಿ ಬೀಸಿದರು. ಸರ್ಕಾರದಿಂದ ವಿತರಿಸುವ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರುತ್ತಿದ್ದು ಅಂಥ ಪಡಿತದಾರರ ಚೀಟಿ ರದ್ದು ಪಡಿಸಬೇಕೆಂದು ಅಹಾರ ಖಾತೆಯ ಅಧಿಕಾರಿಗೆ ಸೂಚಿಸಿದರು.
ಪ್ರಜಾಸೇವೆ ಕಾರ್ಯಕ್ರಮದಲ್ಲಿ ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ಜಮೀನು ಸಮಸ್ಯೆ, ನಿವೇಶನ ಮಂಜೂರು, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯಗಳ 30 ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಲಾಯಿತು. 21 ದಿನದೊಳಗೆ ಪರಿಹಾರ ಕಲ್ಪಿಸಬೇಕೆಂದು ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಯುವಕರು ಅನಗತ್ಯ ಹರಟೆಯಲ್ಲಿ ಕಾಲ ಕಳೆಯದೆ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಲಬೇಕು. ಯುವಕರಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವ ಉದ್ದೇಶದಿಂದ ಭಾರತ ಜೋಡೋ ಕಾರ್ಯಕ್ರಮಗಳಿಗೆ ಸರ್ಕಾರ ಒತ್ತು ನೀಡುತ್ತಿದ್ದು, ಯುವಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮಹೇಶ ಮಾಲಗತ್ತಿ, ತಹಸೀಲ್ದಾರ್ ಅಮರೇಶ ಪಮ್ಮಾರ, ಇಒ ಸತೀಶ ಮಾಯಕೊಂಡ, ಉಪತಹಸೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷಕ ಅನಂದ ಭಾವಿಮಠ, ಹೆಸ್ಕಾಂ ಎಸ್.ಒ. ಚಂದ್ರಶೇಖರ ಕಲ್ಲಾಪೂರ, ಕ್ರೈಂ ಪಿಎಸ್ಐ ಐ.ಎಂ. ಹಿರೇಗೌಡ್ರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು ಹಾಗೂ ಪ್ರಮುಖರಾದ ಕುಮಾರ ಕಕರಡ್ಡಿ, ಧರ್ಮಣ್ಣ ಭಗವತಿ, ಅಶೋಕ ಕೊಪ್ಪದ, ಪ್ರವೀಣ ಚಿಕ್ಕೂರ, ಹವಳೆಪ್ಪ ಮಾದರ ಮತ್ತಿತರರು ಭಾಗವಹಿಸಿದ್ದರು.