ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಾಲೂಕಿನ ಮಾಡ್ರವಳ್ಳಿ ಗ್ರಾಮ ಸ್ವಾತಂತ್ರ್ಯಪೂರ್ವದಿಂದಲೂ ಯಥಾಸ್ಥಿತಿಯಲ್ಲಿದೆ. ಗ್ರಾಮಕ್ಕೆ ರಸ್ತೆ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳೇ ಇಲ್ಲ. ಸರ್ಕಾರ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಪರದಾಡುತ್ತಿರುವುದು ನಾಗರಿಕ ಸಮಾಜದ ವಿಡಂಬನೆಯಾಗಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾದ್ಯಕ್ಷ ಎ.ಡಿ. ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಮೂಲಸೌಲಭ್ಯ ವಂಚಿತ ಮಾಡ್ರವಳ್ಳಿ ಗ್ರಾಮಸ್ಥರಿಗೆ ಸೌಲಭ್ಯ ದೊರಕಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ತಾಲೂಕಿನ ಅಂಜನಾಪುರ ಹೋಬಳಿಯ ಅರಷಿಣಗೆರೆ ಗ್ರಾಮ ಪಂಚಾಯಿತಿಗೆ ಒಳಪಡುವ ಮಾಡ್ರವಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಸುಮಾರು 200ಕ್ಕೂ ಹೆಚ್ಚಿನ ಕುಟುಂಬಗಳು ವಾಸವಾಗಿದ್ದು, 30ಕ್ಕೂ ಹೆಚ್ಚು ಮನೆಗಳು ಮಣ್ಣಿನ ಗೋಡೆಯಿಂದ ನಿರ್ಮಿತವಾಗಿರುವ ಹಂಚಿನ ಮನೆಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಇರುವವರಿಗೆ ಮೂಲಸೌಲಭ್ಯಗಳಿಲ್ಲ ಎಂದು ತಿಳಿಸಿದರು.ಗ್ರಾಮದಲ್ಲಿ ಹಲವರು ಭೀಕರ ರೋಗಗಳಿಗೆ ತುತ್ತಾಗಿ ಜೀವಭಯದಿಂದ ಸುತ್ತಮುತ್ತಲಿನ ಹಿತ್ತಲ, ಹುಣಸೆಕೊಪ್ಪ,ಅರಷಿಣಗೆರೆ ಮುಂತಾದ ಗ್ರಾಮಗಳಿಗೆ ವಲಸೆ ಹೋಗಿದ್ದಾರೆ. ಹಿತ್ತಲ ಗ್ರಾಮ ಪಂಚಾಯಿತಿಯಿಂದ ಅನೇಕರಿಗೆ 30/40 ಅಳತೆಯ ನಿವೇಶನಗಳ ಹಕ್ಕುಪತ್ರ ಕೊಟ್ಟರೂ, ಈ ಹಕ್ಕುಪತ್ರಗಳಿಗೆ ನಿಗದಿಪಡಿಸಿ ನೀಡಲಾಗಿರುವ ದಿನಾಂಕಗಳಿಲ್ಲ. ಸ್ಥಳದಲ್ಲಿ ಹಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರೆ, ಅರಷಿಣಗೆರೆ ಗ್ರಾಮ ಪಂಚಾಯಿತಿಯವರು ಅದೇ ಮನೆಗಳ ನಿವೇಶನವನ್ನು ಬೇರೆಯವರ ಹೆಸರಲ್ಲಿ ಮತ್ತೊಮ್ಮೆ ಹಕ್ಕುಪತ್ರ ನೀಡಿದ್ದಾರೆ ಎಂದು ದೂರಿದರು.
ಮೊದಲು ಹಕ್ಕುಪತ್ರ ಪಡೆದು ಮನೆಗಳ ಕಟ್ಟಿಕೊಂಡವರಿಗೂ, ಈಗ ಪುನಃ ಹಕ್ಕುಪತ್ರ ಪಡೆದವರಿಗೂ ಗೊಂದಲ ಉಂಟಾಗುತ್ತಿದೆ. ಈ ಎರಡೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮನೆ ನಿರ್ಮಿಸಿಕೊಂಡ ಜನರು ದಿನನಿತ್ಯ ಆತಂಕದಿಂದ ಜೀವನ ನಡೆಸುವಂತಾಗಿದೆ ಎಂದು ದೂರಿದರು.ಮಾಡ್ರವಳ್ಳಿಯು ಹಿತ್ತಲ ಗ್ರಾಮ ಪಂಚಾಯಿತಿಗೆ ಕೆಲವೇ ಕಿ.ಮೀ. ದೂರವಿದ್ದು ದುರಾದೃಷ್ಟವಶಾತ್ ಮಾಡ್ರವಳ್ಳಿ ಗ್ರಾಮವನ್ನು 6 ರಿಂದ 7 ಕಿಮೀ ದೂರದಲ್ಲಿರುವ ಅರಷಿಣಗೆರೆ ಗ್ರಾಮ ಪಂಚಾಯಿತಿಗೆ ಸೇರಿಸಲಾಗಿದೆ. ಗ್ರಾಮಸ್ಥರು ಚುನಾವಣಾ ಸಂದರ್ಭ ಮತ ನೀಡಲು ಹಿತ್ತಲ ಗ್ರಾಮ ಪಂಚಾಯಿತಿಗೆ ಬರಬೇಕು. ಆದರೆ ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಅರಷಿಣಗೆರೆ ಗ್ರಾಮ ಪಂಚಾಯಿತಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಜನರ ನೋವು ಕಣ್ಣೀರು ಯಾರೊಬ್ಬರೂ ಒರೆಸುವ ಪ್ರಯತ್ನ ಮಾಡುತ್ತಿಲ್ಲ. ಈ ಕೂಡಲೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಮಾಡ್ರವಳ್ಳಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಪ್ರೊ.ಕೃಷ್ಣಪ್ಪ, ಜಿಲ್ಲಾ ಸಂಯೋಜಕ ಕುಂಸಿ ನರಸಪ್ಪ, ಎಚ್.ಎನ್ ಶ್ರೀನಿವಾಸ್, ಯೋಗೀಶ್, ಮಂಜುನಾಥ್, ಚಂದ್ರಪ್ಪ, ಗುತ್ಯಪ್ಪ, ಚೌಡಪ್ಪ, ಸುರೇಶ್, ಲೋಕೇಶ್, ರತ್ನಮ್ಮ, ಶೋಭಾ ಸಹಿತ ಹಲವರು ಹಾಜರಿದ್ದರು.- - - -8ಕೆಎಸ್.ಕೆಪಿ2:
ಮಾಡ್ರವಳ್ಳಿ ಗ್ರಾಮಕ್ಕೆ ಕೂಡಲೇ ಅಗತ್ಯ ಮೂಲಸೌಲಭ್ಯಗಳ ಕಲ್ಪಿಸುವಂತೆ ಆಗ್ರಹಿಸಿ ಬಿಎಸ್‌ಪಿ ವತಿಯಿಂದ ತಾಪಂ ಮುಂಭಾಗ ಪ್ರತಿಭಟನೆ ನಡೆಸಲಾಯಿತು.