ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ವಿವಿಧ ಯೋಜನೆಗಳು, ಕಾರ್ಯ ಕ್ರಮಗಳ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ.ಆಡಳಿತಾಧಿಕಾರಿಗಳಾದ ಬಿ. ಬಿ. ಕಾವೇರಿ ತಿಳಿಸಿದರು.
ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಧಿಕಾರಿಗಳು ಕ್ಷೇತ್ರದಲ್ಲಿ ಜನರಿಗೆ ಲಭ್ಯವಿದ್ದು ಅವರಿಗೆ ಸ್ಪಂದಿಸಬೇಕು. ಎಸ್‌ಸಿಎಸ್‌ಪಿ/ಟಿಎಸ್ ಪಿ ಕಾರ್ಯಕ್ರಮಗಳನ್ನು ಸುಗಮವಾಗಿ ನಿರ್ವಹಿಸಿ ಗುರಿ ಸಾಧಿಸ ಬೇಕು. ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿ/ಕೆಲಸಗಳನ್ನು ಪೂರ್ಣಗೊಳಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಳೆ ವಿಮೆ ಕುರಿತಂತೆ ವಿಮೆ ಕಂಪನಿಯೊಂದಿಗೆ ಸಭೆ ನಡೆಸಿ, ಸಕಾಲದಲ್ಲಿ ರೈತರಿಗೆ ವಿಮೆ ಲಭಿಸುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ಮೇ 31 ರವರೆಗೆ ವಾಡಿಕೆ 129 ಮಿ.ಮೀ.ಗೆ ಬದಲಾಗಿ 201 ಮಿ.ಮೀ. ಮಳೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 21198 ಮೆ.ಟನ್ ರಸಗೊಬ್ಬರ ವಿತರಣೆಯಾಗಿದೆ. 54,084 ಮೆ.ಟನ್ ದಾಸ್ತಾನು ಇದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಶಿಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ, ಶೇ. 99.3 ರಷ್ಟು ಸಮವಸ್ತ್ರ, ಶೇ.78 ರಷ್ಟು ಉಚಿತ ಪುಸ್ತಕ ವಿತರಣೆ ಆಗಿದೆ. ತಾಲ್ಲೂಕುಗಳ ಬಿಇಓ ಗಳಿಂದ ಶಾಲೆಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಹಾನಿಗೊಳಗಾಗಬಹುದಾದ ಶಾಲೆಗಳ ಪಟ್ಟಿಯನ್ನು ಪಡೆದು ಕ್ರಿಯಾ ಯೋಜನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಿ ಕ್ರಮ ವಹಿಸಲಾಗುವುದು ಎಂದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಶಾಲಾ ದಾಖಲಾತಿ ಪ್ರಮಾಣ ಹೆಚ್ಚಬೇಕು. ಆ ನಿಟ್ಟಿನಲ್ಲಿ ಬಿಇಓ ಮತ್ತು ಇತರೆ ಅಧಿಕಾರಿ ಗಳು, ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಆಸಕ್ತಿ ವಹಿಸಿ ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಕ್ರಮಗಳನ್ನು ಕೈಗೊಳ್ಳಬೇಕು, ಶಿಕ್ಷಕರ ಹಾಜರಾತಿ ಬಗ್ಗೆಯೂ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಮಲೆನಾಡು ಭಾಗಗಳಲ್ಲಿ ಮಕ್ಕಳು ಶಾಲೆಗೆ ಬರುವುದು ಮತ್ತು ಮನೆಗೆ ತೆರಳುವುದರ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಡಿಹೆಚ್ಓ ಡಾ.ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 10220 ಕೆಎಫ್‌ಡಿ ಪರೀಕ್ಷೆ ನಡೆಸಿದ್ದು, 63 ಪಾಸಿಟಿವ್ ಪ್ರಕರಣಗಳಿವೆ. ಹೊಸನಗರದಲ್ಲಿ 1 ಸಾವು ಸಂಭವಿಸಿದೆ. ಪ್ರಸ್ತುತ ಸಾಗರ ತಾಲ್ಲೂಕಿನ ತಾಳಗುಪ್ಪದ ಹಿರೇಮನೆ ಕೆಎಫ್ ಡಿ ಹಾಟ್ ಸ್ಪಾಟ್ ಆಗಿದ್ದು, ಕೆಎಫ್ ಡಿ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಇಲ್ಲಿಯವರೆಗೆ 221 ಡೆಂಘೀ ಪ್ರಕರಣ ವರದಿಯಾಗಿದೆ ಎಂದರು.ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯವರು ಪರೀಕ್ಷಿಸಬೇಕು. ಕುಡಿಯುವ ನೀರಿನ ಬಗ್ಗೆ ಯಾವುದೇ ರಾಜೀ ಮಾಡಿಕೊಳ್ಳದೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಗ್ರಾಮೀಣ ವಸತಿ ಯೋಜನೆಯ ಬಸವ ವಸತಿ ಶೇ. 81 ರಷ್ಟು, ಅಂಬೇಡ್ಕರ್ ವಸತಿ ಶೇ. 72 ರಷ್ಟು, ದೇವರಾಜ್ ಅರಸ್ ವಸತಿ ಶೇ. 51 ರಷ್ಟು ಹಾಗೂ ಪ್ರಧಾನ ಮಂತ್ರಿ ವಸತಿ ಶೇ. 54 ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೂ ನಗರ ವಸತಿ ಯೋಜನೆಯಲ್ಲಿ ಅಂಬೇಡ್ಕರ್ ಮತ್ತು ವಾಜಪೇಯಿ ಯೋಜನೆಯಡಿ ಶೇ. 92 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಡಿಯುಡಿಸಿ ಯೋಜನಾ ನಿರ್ದೇಶಕರು ತಿಳಿಸಿದರು.ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ, ಗೋವಿಂದಾಪುರದಲ್ಲಿ 3000 ಮನೆಗಳ ನಿರ್ಮಾಣ ಯೋಜನೆಯಡಿ 620 ಮನೆಗಳು ಪೂರ್ಣಗೊಂಡು ಫಲಾನುಭವಿಗಳು ವಾಸಿಸುತ್ತಿದ್ದಾರೆ. 700 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು ಹಂಚಿಕೆ ಆಗಬೇಕಿದೆ. ಆದರೆ ಇಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಕೆಲವು ತೊಡಕುಗಳಿದ್ದು, ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಗೋಪಿಶೆಟ್ಟಿಕೊಪ್ಪ ಆಶ್ರಯ ಯೋಜನೆಯು ವ್ಯಾಜ್ಯವೊಂದರ ಕಾರಣದಿಂದ ತೆಡೆಯಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಮಾತನಾಡಿ, ಜನವರಿಯಿಂದ ಮೇವರೆಗೆ ವಾಡಿಕೆಗಿಂತ ಶೇ.27 ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 4 ಜನರು ಮೃತಪಟ್ಟಿದ್ದು ಪರಿಹಾರ ತಲಾ ರೂ.5 ಲಕ್ಷ ಒದಗಿಸಲಾಗಿದೆ ಎಂದರು.ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಯಲಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿಗಳು ಹಾಜರಿದ್ದರು.