ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಮುಗ್ದ ಜನರನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳಬಾರದು ನಾವು ಸರ್ಕಾರಿ ಸೇವೆಗೆ ಸೇರಿದ್ದು ಜನರ ಸೇವೆಗಾಗಿ ಅದನ್ನು ಉಳಿಸಿಕೊಳ್ಳಿ ಎಂದು ಕಲಬುರಗಿ ಲೋಕಾಯುಕ್ತ ಇಲಾಖೆ ಡಿವೈಎಸ್ಪಿ ಗೀತಾ ಬೇನಾಳ ಹೇಳಿದರು.ತಾಲೂಕ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ ಇಲಾಖೆ ಮತ್ತು ಪುರಸಭೆ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಲಂಚತನ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ನಿಮಗೆ ಯಾರು ಕೇಳುವವರಿಲ್ಲ ಎಂದು ತಿಳಿದುಕೊಳ್ಳಬೇಡಿ. ಜನರ ಸಮಸ್ಯೆಗಳನ್ನು ಸ್ಪಂದಿಸುವುದಕ್ಕಾಗಿಯೇ ಲೋಕಾಯುಕ್ತ ಇಲಾಖೆ ಗಮನಹರಿಸುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಅತ್ಯಂತ ದೂರ ಇರುವುದರಿಂದ ಆಧಿಕಾರಿಗಳ ವಿರುದ್ಧ ಯಾರೂ ದೂರು ನೀಡುತ್ತಿಲ್ಲ. ಆದರೆ ಆಳಂದ, ಜೇವರ್ಗಿ ತಾಲೂಕಿನ ಜನರು ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಕೊಡುತ್ತಾರೆ. ತಾಲೂಕಿನ ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಲೋಕಾಯುಕ್ತ ಇಲಾಖೆಯಿಂದ ಬಿಸಿ ಮುಟ್ಟಿಸಬೇಕಾಗುತ್ತದೆ. ಇಲಾಖೆಗೆ ಬರುವ ಜನರಿಗೆ ಸೌಜನ್ಯದಿಂದ ವರ್ತಿಸಿ ಅವರ ಅಹವಾಲು ಬಗ್ಗೆ ಸ್ವೀಕರಿಸಿ ಸ್ಪಂದಿಸಬೇಕೆಂದರು.ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳು ಇರಬೇಕು. ಅಧಿಕಾರಿಗಳ ವಿರುದ್ಧ ದೂರು ಬಂದರೆ ಯಾರಿಗೂ ಬಿಡುವುದಿಲ್ಲ. ಕಂದಾಯ ಇಲಾಖೆಯಲ್ಲಿ ಜಾತಿ ಆದಾಯ, ವಂಶಾವಳಿ, ೩೭೧(ಜೆ), ಭೂಮಾಪನ ಇಲಾಖೆಯಲ್ಲಿ ಲಂಚ ಕೊಡದೇ ಇದ್ದಲ್ಲಿ ಜನರ ಕೆಲಸಗಳು ಆಗುತ್ತಿಲ್ಲವೆಂದು ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಲಾಗುವುದು ಎಂದು ಡಿವೈಎಸ್ಪಿ ಗೀತಾ ಬೇನಾಳ ಹೇಳಿದರು.
ಕನಕಪೂರ ಗ್ರಾಮದ ಹಣಮಂತರಾವ ದೇಶಪಾಂಡೆ, ಧರ್ಮಸಾಗರ ತಾಂಡಾದ ಅರುಣಕುಮಾರ ರಾಠೋಡ, ಗೌತಮ್ ಹೂಡದಳ್ಳಿ, ತುಳಸೀರಾಮ ಪೋಳ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಣ್ಣಪುಟ್ಟ ಕೆಲಸಕ್ಕೂ ಹಣ ಕೊಡಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಸಹಾ ಹಣದ ಬೇಡಿಕೆ ಇಡುತ್ತಾರೆ. ಬಡವರ ಮಕ್ಕಳಿಗೆ ೩೭೧ (ಜೆ) ವಿದಾಭ್ಯಾಸಕ್ಕೆ ಬೇಕಾಗುತ್ತದೆ. ನಿಗಧಿತ ಸಮಯದಲ್ಲಿ ಸಿಗದ ಕಾರಣ ವ್ಯಾಸಂಗ ಹಾಳಾಗುತ್ತಿದೆ ಎಂದು ಧರ್ಮಸಾಗರ ತಾಂಡಾದ ಅರುಣಕುಮಾರ ರಾಠೋಡ ಸಭೆಯಲ್ಲಿ ಕಣ್ಣೀರು ಸುರಿಸಿದರು.ಹಣಮಂತರಾವ ದೇಶಪಾಂಡೆ ವಂಶಾವಳಿ ಪ್ರಮಾಣಕ್ಕಾಗಿ ಕಂದಾಯ ನಿರೀಕ್ಷಕರು ₹೫೦೦ ಲಂಚ ಕೇಳುತ್ತಾರೆ. ಒಂದು ತಿಂಗಳಿಂದ ಕಚೇರಿಗೆ ಅಲೆದಾಡಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭೂಮಾಪನ ಇಲಾಖೆಯಲ್ಲಿ ಫಾರಂ ೧೦ ನಕಲು ಕೊಡಲು ಸಹಾ ಹಣ ನೀಡಬೇಕು. ಉಪ-ನೋಂದಣಿ ಇಲಾಖೆಯಲ್ಲಿ ಜನರ ಆಸ್ತಿ ಪಾಸ್ತಿ ನೋಂದಣಿಯಲ್ಲಿ ಹೆಚ್ಚು ಲಂಚತನ ನಡೆದಿದೆ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಬೇಕು. ಬಿಸಿಎಂ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳೇ ಇಲ್ಲ ಎಂದು ಗೌತಮ ಹೂಡದಲ್ಲಿ ಲೋಕಾಯುಕ್ತ ಗಮನಕ್ಕೆ ತಂದರು.
ಸಭೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಜಶೇಖರ ಹಳಗೋದಿ, ಅಕ್ಕಮಹಾದೇವಿ ನೀಲಿ, ತಹಸೀಲ್ದಾರ ಮಲ್ಲಿಕಾರ್ಜುನ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ೧೫ ದೂರು ಅರ್ಜಿಗಳನ್ನು ಸಲ್ಲಿಸಿದರು.ಲೋಕಾಯುಕ್ತ ಇಲಾಖೆ ಬಗ್ಗೆ ಜನಜಾಗೃತಿ: ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರೆ ಜನರಲ್ಲಿರುವ ಭಯ ಹೋಗಲಾಡಿಸುವ ವಿಶ್ವಾಸ ಮಾಡುವಂತಹ ಕೆಲಸ ಮಾಡಲಾಗುತ್ತಿದೆ. ಆಡಳಿತದಲ್ಲಿ ಚುರುಕುತನ ತೋರಿಸಲಾಗುತ್ತಿದೆ. ಜನರಿಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ಲೋಕಾಯುಕ್ತ ಇಲಾಖೆ ಜನರಲ್ಲಿ ನಂಬಿಕೆ ಇರುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಜನರು ಹಣ ಕೊಡುವುದು ಅಪರಾಧ ಅಧಿಕಾರಿಗಳು ಹಣ ಸ್ವೀಕರಿಸುವುದು ಅಪರಾಧ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿವೈಎಸ್ ಗೀತಾ ಬೇನಾಳ ಹೇಳಿದರು.