ಸಾರಾಂಶ
ತರೀಕೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿದರು.
ತರೀಕೆರೆ: ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಸೂಚನೆ ಮೇರೆಗೆ ಎದುರಾಗಬಹುದಾದ ಪ್ರವಾಹ ಕಾರ್ಯಗಳನ್ನು ನಿಭಾಯಿಸಲು ಇಲಾಖೆ ಅಧಿಕಾರಿಗಳು ಸಿದ್ಧರಿರಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.
ಸೋಮವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಈ ಕುರಿತು ಹೆಚ್ಚು ಜಾಗೃತಿ ವಹಿಸಬೇಕು, ಜನ ಜಾನುವಾರುಗಳ ಪ್ರಾಣ ಹಾನಿಗೆ ಅವಕಾಶವಾಗದಂತೆ ನಿಗಾ ವಹಿಸಬೇಕು. ಮಳೆಗಾಳಿಗೆ ವಿದ್ಯುತ್ ಲೈನ್ ತುಂಡಾಗುವುದು, ಮರ ಬೀಳುವಂತಹ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸುವುದು ಮುಖ್ಯ ಎಂದರು.
ತಹಸೀಲ್ದಾರ್ ವಿ.ಎಸ್.ರಾಜೀವ್ ಅವರು ಮಾತನಾಡಿ, ವಿಪತ್ತು ಸಂಭವಿಸುವ ಸಂದರ್ಭಗಳಿರುವುದರಿಂದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿರಬೇಕು, ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಣೇಶ್ ಮಾತನಾಡಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಾಗಲೇ ವಿಪತ್ತು ಎದುರಾಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದ್ದು, ಹವಾಮಾನ ಇಲಾಖೆಯ ಸೂಚನೆಯ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಪುರಸಭೆ ಮಖ್ಯಾಧಿಕಾರಿ ಹೆಚ್.ಪ್ರಶಾಂತ್ ಮಾತನಾಡಿದರು. ಸಭೆಯಲ್ಲಿ ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪಕಟ್ಟೋಳಿ, ಡಿವೈಎಸ್‌ಪಿ ಹಾಲಮೂರ್ತಿರಾವ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು.