ಮೈಲಾರ ಕಪಿಲಮುನಿ ಪೀಠದ ವಂಶಸ್ಥರ ಮೇಲೆ ಅಧಿಕಾರಿ ದರ್ಪ?

| Published : Feb 09 2025, 01:31 AM IST

ಸಾರಾಂಶ

ಈವರೆಗೂ ನಮ್ಮ ವಂಶಸ್ಥರು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದೇವೆ.

ಹೂವಿನಹಡಗಲಿ: ಮೈಲಾರಲಿಂಗೇಶ್ವರ ದೇವಸ್ಥಾನದ ಕಪಿಲಮುನಿ ಪೀಠದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ವಂಶಸ್ಥರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಶನಿವಾರ ಕುತ್ತಿಗೆ ಹಿಡಿದು ಹೊರಗೆ ತಳ್ಳಿದ ಈ ಘಟನೆ ನಡೆದಿದ್ದು, ಅಧಿಕಾರಿಯ ನಡೆ ವಿವಾದಕ್ಕೆ ಎಡೆಮಾಡಿದೆ.

ಈ ಕುರಿತು ಸ್ವತಃ ವೆಂಕಪ್ಪಯ್ಯ ಒಡೆಯರ್‌ ಪ್ರತಿಕ್ರಿಯಿಸಿ, ಈವರೆಗೂ ನಮ್ಮ ವಂಶಸ್ಥರು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದೇವೆ. ಆದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ಇಒ ಹನುಮಂತಪ್ಪ ಎಂಬುವವರು ಶನಿವಾರ ಮುಂಜಾನೆ ಧಾರ್ಮಿಕ ಕೈಂಕರ್ಯದಲ್ಲಿದ್ದ ನಮ್ಮವರನ್ನು ಕುತ್ತಿಗೆ ಹಿಡಿದು ಹೊರಗೆ ತಳ್ಳಿ, ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದರು.

ದೇವಸ್ಥಾನದಲ್ಲಿ ವಂಶ ಪಾರಂಪರ್ಯ ಧರ್ಮಕರ್ತರಿಗೆ, ದೇವರಿಗೆ ನಮಸ್ಕಾರ ಮಾಡಲು ಮಾತ್ರ ಅವಕಾಶವಿದೆ. ಆದರೆ ಅವರು ದೇಗುಲದ ಒಳಗೆ ಇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆಂದು ಹೇಳುತ್ತಾರೆ. ಆ ಆದೇಶ ನಮಗೆ ಇನ್ನೂ ತಲುಪಿಲ್ಲ. ಗೊತ್ತೂ ಇಲ್ಲ. ಏಕಾಏಕಿ ಈ ದೇವಸ್ಥಾನದ ಅಧಿಕಾರಿ ಮೈಲಾರದ ಕಪಿಲಮುನಿ ಪೀಠದ ವಂಶಸ್ಥರ ಮೇಲೆ ದರ್ಪ ಮೆರೆದಿದ್ದಾರೆ. ವಂಶ ಪಾರಂಪರ್ಯವಾಗಿ ನಮಗೆ ಇದ್ದ ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದರಿಂದ ನಾವು ಭಯದಲ್ಲಿದ್ದೇವೆಂದು ಅವರು ಆತಂಕ ವ್ಯಕ್ತಪಡಿಸಿದರು.

ಹಿಂದಿನಿಂದಲೂ ಮೈಲಾರಲಿಂಗೇಶ್ವರನ ಮುಂದೆಯೇ ಗೊರವರಿಗೆ ದೀಕ್ಷೆ, ಸಣ್ಣ ಮಕ್ಕಳ ಜವುಳ ತೆಗೆಯುವುದು, ದೇವರ ದರ್ಶನ, ಭಂಡಾರ ಹಚ್ಚುವುದು ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ನಮ್ಮ ವಂಶಸ್ಥರೇ ಮಾಡಿಕೊಂಡು ಬಂದಿದ್ದೇವೆ. ಆದರೆ ಕೆಲ ಧಾರ್ಮಿಕ ಕಾರ್ಯಗಳನ್ನು ದೇಗುಲದ ಹೊರಗೆ ಮಾಡಲು ಬರುವುದಿಲ್ಲ. ಇಂದು ನಮ್ಮ ವಂಶಸ್ಥರು ಈ ಧಾರ್ಮಿಕ ಕಾರ್ಯ ಮಾಡುವ ಸಂದರ್ಭದಲ್ಲಿ, "ನೀವು ಯಾವುದೇ ಕಾರಣಕ್ಕೂ ದೇವಸ್ಥಾನದ ಒಳಗೆ ಇರುವಂತಿಲ್ಲ " ಎಂದು ದೇಗುಲದ ಇಒ ಕಪಿಲಮುನಿ ಪೀಠದ ವಂ‍ಶಸ್ಥರನ್ನು ಹೊರಗೆ ತಳ್ಳಿದ್ದಾರೆ ಎಂದರು.

ದೇವಸ್ಥಾನದ ಧಾರ್ಮಿಕ ಪರಂಪರೆ, ನಮ್ಮ ಹಕ್ಕು- ಬಾಧ್ಯತೆಗಳ ಕುರಿತು 1933ರಲ್ಲಿ ಮದ್ರಾಸ್‌ ಸರ್ಕಾರದ ಸಂದರ್ಭದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ದೇವಸ್ಥಾನದ ಅಧಿಕಾರಿಯು ದೇಗುಲದ ಆಸ್ತಿ, ಲೆಕ್ಕಪತ್ರ ವ್ಯವಹಾರ ಮಾಡಬೇಕಿತ್ತು. ನಾವು ವಂಶ ಪಾರಂಪರ್ಯವಾಗಿರುವ ಧರ್ಮಕರ್ತರಾಗಿದ್ದೇವೆ. ನಮಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲು ಅವಕಾಶವಿದೆ. ಜಾತ್ರೆಯ ಸಂದರ್ಭದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಈ ಅಧಿಕಾರಿಯಿಂದ ನಡೆದಿದೆ ಎಂದು ಹೇಳಿದರು.

ದೇವಸ್ಥಾನಕ್ಕೆ ಸಂಬಂಧಪಟ್ಟ ಆದೇಶಗಳನ್ನು ಇಲ್ಲಿ ಚರ್ಚಿಸಿ, ನಂತರ ಆದೇಶ ನೀಡಬೇಕಿತ್ತು. ಅದು ಕಾನೂನು ಬದ್ಧವಾಗಿದ್ದರೆ ನಾವು ಕೂಡ ಪಾಲನೆ ಮಾಡುತ್ತೇವೆ. ಅದಾವುದನ್ನು ಮಾಡದೇ ಹೀಗೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಂಶ ಪಾರಂಪರ್ಯ ಧರ್ಮಕರ್ತರ ವಂಶಸ್ಥರನ್ನು ದೇವಸ್ಥಾನದಿಂದ ಹೊರಗೆ ಹಾಕಿರುವ ಕುರಿತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎನ್ನುತ್ತಾರೆ ದೇಗುಲದ ಇಒ ಹನುಮಂತಪ್ಪ.