ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿಯನ್ನು ಕೃಷಿ ಇಲಾಖೆ‌ ಅಧಿಕಾರಿಗಳು, ತಾಲೂಕು ಆಡಳಿತ ಸಕಾರಾತ್ಮಕ ಭರವಸೆ ನೀಡಿದ ಹಿನ್ನೆಲೆ ರೈತರು ಹಿಂಪಡೆದರು.

ಕನ್ನಡಪ್ರಭ ವಾರ್ತೆ ರೋಣ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿಯನ್ನು ಕೃಷಿ ಇಲಾಖೆ‌ ಅಧಿಕಾರಿಗಳು, ತಾಲೂಕು ಆಡಳಿತ ಸಕಾರಾತ್ಮಕ ಭರವಸೆ ನೀಡಿದ ಹಿನ್ನೆಲೆ ರೈತರು ಹಿಂಪಡೆದರು.

ಧರಣಿ ಸ್ಥಳಕ್ಕೆ ಬೆಳಗ್ಗೆಯಿಂದ ಸಂಜೆವರೆಗೂ ತಹಸೀಲ್ದಾರ ನಾಗರಾಜ ಕೆ. ಸಾಕಷ್ಟು ಬಾರಿ ರೈತರ ಮನವೊಲಿಕೆ ಪ್ರಯತ್ನಿಸಿದರು. ಸಂಜೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕ ಜಯಪ್ರಕಾಶ ಟಿ.ಸಿ., ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಮಾಳೇದ ಭೇಟಿ ನೀಡಿ, ರೈತರೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿ, ಮನವೊಲಿಕೆಗೆ ಯತ್ನಿಸಿದರು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ, ತಾಲೂಕು ಅಧ್ಯಕ್ಣ ಸಂಗಣ್ಣ ಪವಾಡಶೆಟ್ಟಿ ಸೇರಿ ಅನೇಕ ರೈತ ಮುಖಂಡರು ಮಾತನಾಡಿ, 2016ರಿಂದ 2025ರ ವರೆಗೆ ರೋಣ ತಾಲೂಕಿನಲ್ಲಿನ ಬೆಳೆವಿಮೆ ಬಗ್ಗೆ ಲಿಖಿತ ಮಾಹಿತಿ ನೀಡಬೇಕು, ಮೆಣಸಿನಕಾಯಿ ಬೆಳೆಗೆ 9 ವರ್ಷದಲ್ಲಿ ಬೆಳೆವಿಮೆ ಎಷ್ಟು ಬಿಡುಗಡೆಯಾಗಿದೆ, ಲಾಭ ಪಡೆದ ರೈತರ ವಿವರ ನೀಡಬೇಕು ಬೀಜ ಗೊಬ್ಬರ ಉಚಿತವಾಗಿ ವಿತರಣೆ ಮಾಡಬೇಕು, ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಎಕರೆಗೆ ₹50 ಸಾವಿರ ಬಿಡುಗಡೆಯಾಗಬೇಕು. ಬರಪೀಡಿತ ತಾಲೂಕೆಂದು ಘೋಷಿಸಿದರೆ ಸಾಲದು, ಪ್ಯಾಕೇಜ್ ಬಗ್ಗೆ ಘೋಷಣೆಯಾಗಬೇಕು. ಸಾಲಮನ್ನಾ ಬಗ್ಗೆ ಸರ್ಕಾರ ಕೈಗೊಂಡ ಕ್ರಮ ಕುರಿತು ಲಿಖಿತವಾಗಿ ಮಾಹಿತಿ ನೀಡಬೇಕು. ಇಲ್ಲವಾದರೆ ಎಷ್ಟು ದಿನಗಳಲ್ಲಿ ಬೇಡಿಕೆಗಳನ್ನು ಈಡೆರಿಸಲಾಗುವುದು ಎಂಬುದರ ಬಗ್ಗೆ ಲಿಖಿತ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

ತಹಸೀಲ್ದಾರರಿಂದ‌ ಮನವೊಲಿಕೆ, ಧರಣಿ ವಾಪಸ್:

ಬುಧವಾರ ಸಂಜೆ 7 ಗಂಟೆವರೆಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ರೈತರ ಮನವೊಲಿಕಗೆ ಯತ್ನಿಸಿದರು.‌ ಬಳಿಕ ತಹಸೀಲ್ದಾರ ನಾಗರಾಜ ರೈತರೊಂದಿಗೆ ರಾತ್ರಿ 10 ಗಂಟೆವರೆಗೂ ಮಾತುಕತೆ ನಡೆಸಿ, ಕೊನೆಗೂ ಮನವೊಲಿಸುವಲ್ಲಿ ಯಶಸ್ವಿಯಾದರು. ತಕ್ಷಣ ಈಡೇರುವ ಬೇಡಿಕೆಗಳ ಈಡೇರಿಸಲಾಗುವುದು. ಸರ್ಕಾರ ಹಂತದಲ್ಲಿನ ಬೇಡಿಕೆಗಳಿಗೆ ಹಂತ ಹಂತವಾಗಿ ಪರಿಹಾರ ಸಿಗಲಿದೆ. ರೈತರ ಯಾವುದೇ ಬೇಡಿಕೆಗಳಿಗೆ ತಾಲೂಕು ಆಡಳಿತ ಇದ್ದೇ ಇರುತ್ತದೆ ಎಂದು ತಹಸೀಲ್ದಾರ ಭರವಸೆ ನೀಡಿದರು. ರೈತರು ಧರಣಿ ಸತ್ಯಾಗ್ರಹ ಹಿಂಪಡೆದರು.ಪ್ರತಿಭಟನೆಯಲ್ಲಿ ರೋಣ ತಾಲೂಕಿನ ಜಿಗಳೂರ, ಸವಡಿ, ಅಬ್ಬಿಗೇರಿ, ಯಾವಗಲ್ಲ, ಯಾ.ಸ. ಹಡಗಲಿ, ಬಿ.ಎಸ್. ಬೇಲೇರಿ, ಯರೇಬೇಲೇರಿ, ಕೊತಬಾಳ, ಬೆಳವಣಕಿ, ಮಲ್ಲಾಪೂರ, ಸಂದಿಗವಾಡ, ಅರಹುಣಸಿ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಬಾಸಲಾಪೂರ, ಹೊಸಳ್ಳಿ, ಹಿರೇಹಾಳ, ಮುಗಳಿ, ಹುಲ್ಲೂರ, ಮುದೇನಗುಡಿ ಸೇರಿದಂತೆ ಅನೇಕ ಗ್ರಾಮದ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.