ಡೆಂಘೀ ತಡೆಗೆ ಅಧಿಕಾರಿಗಳು ವಾರಿಯರ್ಸ್‌ ಆಗಿ

| Published : Jun 19 2024, 01:00 AM IST

ಡೆಂಘೀ ತಡೆಗೆ ಅಧಿಕಾರಿಗಳು ವಾರಿಯರ್ಸ್‌ ಆಗಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪಾಲಿಕೆ ಆಯೋಜಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ಸಾವನ್ನಪ್ಪಿದರು. ಹೀಗಾಗಿ ಅಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಾರದು.

ಹುಬ್ಬಳ್ಳಿ:

ಡೆಂಘೀ ಒಂದು ಮಾರಕ ರೋಗವಾಗಿದೆ. ಕೊರೋನಾ ವೇಳೆ ಅಧಿಕಾರಿ ವರ್ಗ, ವೈದ್ಯರು, ದಾದಿಯರೆಲ್ಲರೂ ವಾರಿಯರ್ಸ್‌ಗಳಂತೆ ಕೆಲಸ ಮಾಡಿದ್ದರು. ಅದೇ ರೀತಿ ಇದೀಗ ಡೆಂಘೀ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಬೇಕು. ನಿಮಗೆ ನಾವು ಸಹಕಾರ ನೀಡುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಯ ಹಸ್ತ ನೀಡಿದರು.

ಅವರು ಇಲ್ಲಿನ ಮೂರುಸಾವಿರ ಮಠದ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹು-ಧಾ ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡೆಂಘೀ ಕುರಿತ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳಿಗೆ ಡೆಂಘೀ ಕುರಿತು ಜಾಗೃತಿ ಮೂಡಿಸಿದರೆ, ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ನಾಲಾ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ಘನ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಲ್ಲರೂ ತಂಡವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಡೆಂಘೀ ನಿಯಂತ್ರಿಸಲು ಸಾಧ್ಯ ಎಂದರು.

ವಿಪ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪಾಲಿಕೆ ಆಯೋಜಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ಸಾವನ್ನಪ್ಪಿದರು. ಹೀಗಾಗಿ ಅಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಾರದು. ಈಗಿನಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಮಳೆಗಾಲ ಇರುವುದರಿಂದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಎಲ್ಲ ವಾರ್ಡ್‌ಗಳನ್ನು ಸ್ವಚ್ಛಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಸಾನ್ನಿದ್ಧ ವಹಿಸಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಚ್ಛತೆ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಬೇಕು. ಮನೆಯ ಮುಂದೆ ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳಬೇಕಿದೆ. ಉತ್ತಮ ಪರಿಸರ ಅಭಿವೃದ್ಧಿಪಡಿಸುವಲ್ಲಿ ನಿರತರಾಗಬೇಕು. ಡೆಂಘೀ ನಿಯಂತ್ರಿಸಲು ಎಲ್ಲರೂ ಮುಂದಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಆರೋಗ್ಯ ಮೇಲ್ವಿಚಾರಾಣಾಧಿಕಾರಿ ಕೆ.ಐ. ಶ್ಯಾವಿ ಮಾತನಾಡಿದರು. ಮೇಯರ್‌ ವೀಣಾ ಭಾರದ್ವಾಡ್ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಡೆಂಘೀ ಹರಡುವಿಕೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.

ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ, ಸದಸ್ಯರಾದ ಸುನೀತಾ ಬುರಬುರೆ, ಮೀನಾಕ್ಷಿ ವಂಟಮೂರಿ, ಚಂದ್ರಿಕಾ, ಪ್ರೀತಿ, ಸಭಾನಾಯಕ ಶಿವು ಹಿರೇಮಠ, ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಆರೋಗ್ಯಾಧಿಕಾರಿ ಶ್ರೀಧರ ದಂಡೆಪ್ಪನ್ನವರ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಶಿಕ್ಷಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.