ಅಧಿಕಾರಿಗಳು ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ: ಕಾಂತರಾಜ್‌ ಸೂಚನೆ

| Published : Jul 19 2024, 12:47 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನಾದ್ಯಂತ ಅತ್ಯಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ಯಾವುದೇ ಕಾರಣಕ್ಕೂ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ತರೀಕೆರೆ ಎಸಿ ಕಾಂತರಾಜು ಸೂಚನೆ ನೀಡಿದರು.

ತಾಲೂಕು ಪಂಚಾಯಿತಿಯಲ್ಲಿ ಪ್ರಕೃತಿ ವಿಕೋಪ । ಮಳೆ ಹಾನಿ ಕುರಿತು ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಾದ್ಯಂತ ಅತ್ಯಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ಯಾವುದೇ ಕಾರಣಕ್ಕೂ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ತರೀಕೆರೆ ಎಸಿ ಕಾಂತರಾಜು ಸೂಚನೆ ನೀಡಿದರು.

ಗುರುವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಪ್ರಕೃತಿ ವಿಕೋಪ, ಮಳೆ ಹಾನಿ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಭಾವಚಿತ್ರ ತೆಗೆಸಬೇಕು. ಭಾವಚಿತ್ರದೊಂದಿಗೆ ಕಡತವನ್ನು ಕಳುಹಿಸ ಬೇಕು. ಯಾವುದೇ ಕಾರಣಕ್ಕೂ ಯಾರದ್ದೋ ಒತ್ತಡಕ್ಕೆ ಮಣಿದು ಅನರ್ಹ ಫಲಾನುಭವಿಗೆ ಪರಿಹಾರ ಕೊಡಿಸುವ ಕಾರ್ಯ ಮಾಡಬಾರದು. ಅರ್ಹ ಫಲಾನುಭವಿಗೆ ಮಾತ್ರ ಸರ್ಕಾರದ ಸಹಾಯಧನ ದೊರಕಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ ಗಳೂ ಕೂಡ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಡೆಂಘೀ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಔಷಧಿಗಳ ಸಿಂಪಡಣೆ, ಫಾಗಿಂಗ್ ಮಾಡಬೇಕು. ನಿಂತಿರುವ ನೀರಿನಲ್ಲಿ ಲಾರ್ವಾಗಳ ಉತ್ಪತ್ತಿ ಹಾಗೂ ಅದರಿಂದ ಸೊಳ್ಳೆಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂದು ಸಾರ್ವ ಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ಈಗಾಗಲೇ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ನಡೆಸಲಾಗುವುದು. ಆರೋಗ್ಯ ಇಲಾಖೆಯಡಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರವಾರು ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.ತಾಪಂ ಇಓ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಈಗಾಗಲೇ ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒ ಗಳಿಗೆ ಪ್ರಕೃತಿ ವಿಕೋಪದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಲವಾರು ಸಭೆಗಳನ್ನು ಮಾಡಲಾಗಿದೆ. ಗ್ರಾಪಂ ಮಟ್ಟದಲ್ಲಿ ಪ್ರಕೃತಿ ವಿಕೋಪ ಎದುರಿಸಲು ಎಲ್ಲಾ ರೀತಿಯಲ್ಲೂ ಸಹಕಾರ ನೀಡುವಂತೆ ಸೂಚಿಸಿದ್ದೇನೆ. ಗ್ರಾಪಂ ಮಟ್ಟದಲ್ಲಿ ಆಗಬೇಕಾದ ಕ್ರಮಗಳನ್ನು ಗ್ರಾಮ ಪಂಚಾಯಿತಿಯಿಂದಲೇ ನಿಭಾಯಿಸಲು ಸೂಚಿಸಿದೆ ಎಂದರು.

ಎ.ಸಿ.ಕಾಂತರಾಜ್ ಮಾತನಾಡಿ, ಕೇವಲ ಒಂದು ಇಲಾಖೆಯಿಂದ ಮಾತ್ರ ಪ್ರಕೃತಿ ವಿಕೋಪ ಎದುರಿಸಲು ಸಾಧ್ಯವಿಲ್ಲ. ಎಲ್ಲಾ ಇಲಾಖೆಗಳ ಸಹಕಾರ ಅತ್ಯಗತ್ಯ. ಆದ್ದರಿಂದ ಎಲ್ಲಾ ಇಲಾಖಾಧಿಕಾರಿಗಳೂ ಕೂಡ ಒಬ್ಬರಿಗೊಬ್ಬರು ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು. ಗ್ರಾಪಂ ಮಟ್ಟದಿಂದ ಹಿಡಿದು ತಾಲೂಕು ಮಟ್ಟದವರೆಗೂ ಉತ್ತಮ ಸಮನ್ವಯ ಹೊಂದಿರಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ನಮ್ಮ ಕಾರ್ಯದೊಂದಿಗೆ ಸೇರಿಸಿಕೊಳ್ಳಬೇಕು ಎಂದು ಸೂಚಿಸಿದರು.

ನರಸಿಂಹರಾಜಪುರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗುತ್ತಿದೆ. ಮುಂದೆ ಮಳೆಯೂ ಜೋರಾಗ ಬಹುದಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಸದಾ ಎಚ್ಚರದಿಂದಿರಬೇಕು. ಕಚೇರಿಗಳಲ್ಲಿ 24-7 ಕಂಟ್ರೋಲ್ ರೂಂ ಸ್ಥಾಪಿಸಿಬೇಕು. ಕಂಟ್ರೋಲ್ ರೂಂಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ, ದೂರವಾಣಿ ನಂಬರ್ ಅನ್ನು ಸಾರ್ವಜನಿಕರಿಗೆ ಪ್ರಚುರ ಪಡಿಸಬೇಕು. ದೂರವಾಣಿಗೆ ಕರೆ ಬಂದಾಗ ನಿಯೋಜಿತ ಸಿಬ್ಬಂದಿ ಯಾವುದೇ ಸಂದರ್ಭದಲ್ಲೂ ಸ್ವೀಕರಿಸಬೇಕು ಎಂದರು.ಸಭೆಯಲ್ಲಿ ತಾಪಂ. ಇಒ ಎಚ್.ಡಿ.ನವೀನ್ ಕುಮಾರ್, ತಹಸೀಲ್ದಾರ್ ತನುಜಾ.ಟಿ.ಸವದತ್ತಿ, ತಾಲೂಕಿನ ಎಲ್ಲಾ ಇಲಾಖಾಧಿ ಕಾರಿಗಳು ಹಾಗೂ ಗ್ರಾಪಂ ಪಿಡಿಒ ಇದ್ದರು.