ಗ್ಯಾರಂಟಿ ಅನುಷ್ಠಾನದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ

| Published : Oct 12 2025, 01:01 AM IST

ಗ್ಯಾರಂಟಿ ಅನುಷ್ಠಾನದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳಸ ಗ್ರಾಮದ ಹಾಗೂ ಮುಳೋಳ್ಳಿ ಗ್ರಾಮದ ಸಂಗೀತ ಕೊಟ್ರಣ್ಣವರ ಎಂಬ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿ ಎರಡುವರೆ ವರ್ಷವಾದರೂ ಯೋಜನೆ ಲಾಭ ದೊರೆತಿಲ್ಲ

ಕುಂದಗೋಳ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರುತ್ತಿರುವ ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯದ ಬಗ್ಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ ಆರಂಭದಿಂದಲೇ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಯಿತು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಸದಸ್ಯರು ದೂರಿದರು.

ಸಭೆಯಲ್ಲಿ ಸಿದ್ದು ಕೊಟ್ರಣ್ಣವರ ಎಂಬುವವರು ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳಸ ಗ್ರಾಮದ ಹಾಗೂ ಮುಳೋಳ್ಳಿ ಗ್ರಾಮದ ಸಂಗೀತ ಕೊಟ್ರಣ್ಣವರ ಎಂಬ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿ ಎರಡುವರೆ ವರ್ಷವಾದರೂ ಯೋಜನೆ ಲಾಭ ದೊರೆತಿಲ್ಲ. ಸಂಬಂಧಿಸಿದ ಸಿಡಿಪಿಒ ಬಳಿ ವಿಚಾರಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ.

ಹೀಗೆ ಒಂದು ಅರ್ಜಿ ಸರಿಪಡಿಸದಿದ್ದರೆ ಇಂತಹ ಅಧಿಕಾರಿಗಳು ಏಕೆ ಬೇಕು? ಹೀಗೆ ಮುಂದುವರೆದರೆ ಫಲಾನುಭವಿಗಳನ್ನು ಕರೆದುಕೊಂಡು ಪ್ರತಿಭಟನೆ ಮಾಡುವುದಾಗಿ ಸಿದ್ದು ಕೊಟ್ರಣ್ಣವರ ಗುಡುಗಿದರು. ಇದೇ ವೇಳೆ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳೇ ಫಲಾನುಭವಿಗೆ ಹಣ ನೀಡಬೇಕು ಎಂದು ಪಟ್ಟು ಹಿಡಿದರು.

ಇನ್ನೋರ್ವ ಸದಸ್ಯರು ಮಾತನಾಡಿ ಆಹಾರ ನಿರೀಕ್ಷಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕಳೆದ ತಿಂಗಳು ದೇವನೂರ ಗ್ರಾಮದಲ್ಲಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರನ್ನು ಹಿಡಿಯಲಾಗಿತ್ತು. ಆದರೆ, ಆ ಅಕ್ಕಿ ಎಲ್ಲಿಗೆ ಹೋಯಿತು?, ಮುಂದೆ ಅವರಿಗೆ ಏನು ಕ್ರಮ ಆಯಿತು ಎಂಬುದು ಇಲ್ಲಿಯ ವರೆಗೂ ತಿಳಿದಿಲ್ಲ ಎಂದು ಪ್ರಶ್ನಿಸಿ, ಅಧಿಕಾರಿಗಳ ನಿಗೂಢ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳೇ ಹೊಣೆ: ಸದಸ್ಯರ ದೂರುಗಳನ್ನು ಆಲಿಸಿದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪಬೇಕು. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡುತ್ತಿದೆ. ಆದರೆ, ಅಧಿಕಾರಿಗಳು ಪ್ರಾಮಾಣಿಕಲಾಗಿ ಯೋಜನೆ ಅರ್ಹರಿಗೆ ತಲುಪಿಸದೇ ನಿರ್ಲಕ್ಷ್ಯ ತೋರಿದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ತಾಪಂ ಇಒ ಜಗದೀಶ್ ಕಮ್ಮಾರ, ತಹಸೀಲ್ದಾರ್ ರಾಜು ಮಾವರಕರ, ‌ಗ್ಯಾರಂಟಿ ಯೋಜನೆಯ ಸಮಿತಿ ‌ಸದಸ್ಯರಾದ‌ ಅಡಿವೆಪ್ಪ ಹೆಬಸೂರ, ಸೋಮಲಿಂಗಪ್ಪ ಹೊಸಮನಿ, ಯಲ್ಲಪ್ಪ ಶಿಂಗಣ್ಣವರ, ಸಚಿನ ಪೂಜಾರ, ಗೀತಾ ಕೊಟೆಗೌಡ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.