ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ಸರ್ಕಾರಿ ವ್ಯಾಪ್ತಿಗೆ ಒಳಪಟ್ಟಿದ್ದ ಕೋಟ್ಯಂತರ ರು ಬೆಲೆಬಾಳುವ ಎರಡು ಎಕರೆ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಪಂ,ಸಿಇಒ ಹಾಗೂ ಜಿಲ್ಲಾಧಿಕಾರಿಗೆ ದೂರು ಬಂದ ಹಿನ್ನಲೆಯಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ತಾಲೂಕಿನ ವೈ.ಎನ್.ಹೊಸಕೋಟೆಗೆ ಭೇಟಿ ನೀಡಿ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಸರ್ಕಾರಿ ಜಮೀನಿನ ಪರಿಶೀಲನೆ ಕಾರ್ಯ ನಡೆಸಿದರು.ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಇದೇ ವೈ.ಎನ್.ಹೊಸಕೋಟೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಮೂರು ಎಕರೆ ಜಮೀನಿದ್ದು ಈ ಜಮೀನನ್ನು ರೈತರು ಹಾಗೂ ಗ್ರಾಹಕರ ಉಪಯೋಗಕ್ಕಾಗಿ ಮೀಸಲಿರಿಸಲಾಗಿದೆ. ಪ್ರತಿ ಮಂಗಳವಾರ ಈ ಜಾಗದಲ್ಲಿ ತರಕಾರಿ ಹಾಗೂ ಹಣ್ಣು ಹೂವು ಇತರೆ ತರಕಾರಿ,ಇತರೆ ವ್ಯಾಪಾರ ವ್ಯವಹಾರಗಳ ಸಂತೆ ಮಾರುಕಟ್ಟೆ ನಡೆಸಲಾಗುತ್ತಿದೆ.ಗ್ರಾಪಂನಿಂದ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಮೂರು ಎಕರೆ ಸರ್ಕಾರಿ ಜಮೀನನ್ನು ವೈ.ಎನ್.ಹೊಸಕೋಟೆಯ ಪ್ರಭಾವಿ ಮುಖಂಡರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವ ಮೂಲಕ ನಿವೇಶನ ಹಂಚಿಕೆ ಮಾಡಿ ಸ್ಥಳೀಯರಿಗೆ ಮಾರಾಟ ಮಾಡಿದ್ದರು. ಸಾರ್ವಜನಿಕರು ಗಮನ ಸೆಳೆದ ಮೇರೆಗೆ ಸಂತೆ ಮಾರುಕಟ್ಟೆ ಮೈದಾನದ ಜಾಗಕ್ಕೆ ಸಂಬಂಧಪಟ್ಟ ಫಹಣಿ ಹಾಗೂ ಇತರೆ ಅಗತ್ಯ ದಾಖಲೆಯೊಂದಿಗೆ ಇಲ್ಲಿನ ಸಾಮಾಜಿಕ ಹೋರಾಟಗಾರರಾದ ಹಾಗೂ ಮುಖಂಡ ಎನ್.ರಾಮಾಂಜಿನಪ್ಪ ಹಾಗೂ ನಾಗೇಶ ಬಾಬು ದಾಖಲೆ ಸಮೇತ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ತಾಪಂ ಗ್ರಾಪಂ ಹಾಗೂ ತಾಲೂಕು ಸರ್ವೆ ಇಲಾಖೆಯ ಅಧಿಕಾರಿಗಳು ಗ್ರಾಪಂನಿಂದ ಮೀಸಲಿರಿಸಿದ್ದ ಸಂತೆ ಮೈದಾನದ ಜಮೀನಿನ ಸರ್ವೆ ಕಾರ್ಯ ನಡೆಸಿ ಕಲ್ಲು ಹೂಳುವ ಮೂಲಕ ಜಮೀನಿನ ಗಡಿ ಗುರುತು ಮಾಡಿದರು.