ಅಧಿಕಾರಿಗಳ ಅನಾದರ: ಶಿಗೇಹಳ್ಳಿಗಿಲ್ಲ ಶುದ್ಧ ನೀರು

| Published : Jul 12 2024, 01:36 AM IST

ಅಧಿಕಾರಿಗಳ ಅನಾದರ: ಶಿಗೇಹಳ್ಳಿಗಿಲ್ಲ ಶುದ್ಧ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ತಾಲೂಕಿನ ಶಿಗೇಹಳ್ಳಿ ಗ್ರಾಮದ ಕುಡಿಯುವ ನೀರಿನ ಬೋರ್‌ವೆಲ್‌ನಿಂದ ಮಣ್ಣು ಮಿಶ್ರಿತ ಕಲುಷಿತ ನೀರು.

ಎಚ್.ಕೆ.ಬಿ.ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಶಿಗೇಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಪ್ರತಿನಿತ್ಯ ಮಣ್ಣು ಮಿಶ್ರಿತ ನೀರು ಸೇವನೆಮಾಡುವುದರಿಂದ ಗ್ರಾಮಸ್ಥರಿಗೆ ಶೀತ, ಜ್ವರ ರೋಗಗಳು ಹರಡಲು ಕಾರಣವಾಗಿದೆ.

ಸೊರಬ ಪುರಸಭೆ ವ್ಯಾಪ್ತಿಗೆ ಒಳಪಟುವ ಶಿಗೇಹಳ್ಳಿ, ಪಟ್ಟಣದಿಂದ 5 ಕಿಮೀ ದೂರದಲ್ಲಿದೆ. ಸುಮಾರು 50 ಮನೆಗಳಿವೆ. ಗ್ರಾಮಸ್ಥರು ಕುಡಿವ ನೀರಿಗಾಗಿ ಒಂದೇ ಕೊಳವೆ ಬಾವಿ ಅವಲಂಬಿಸಿದ್ದಾರೆ. ಬೋರ್‌ವೆಲ್‌ನಿಂದ ಪೈಪ್‌ಲೈನ್ ಮೂಲಕ ಗ್ರಾಮದ ಪ್ರತಿ ಮನೆಗೆ ಸರಬರಾಜು ಆಗುವ ನೀರು ಕಳೆದ 4 ದಿನಗಳಿಂದ ಕಲುಷಿತಗೊಂಡಿದೆ. ಮಣ್ಣು ಮಿಶ್ರಿತ ರಾಡಿ ನೀರು ಸರಬರಾಜು ಆಗುತ್ತಿದ್ದು, ಇದನ್ನೇ ಗ್ರಾಮಸ್ಥರು ಕುಡಿಯಲು ಮತ್ತು ಗೃಹ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಕೊಳವೆ ಬಾವಿಯಿಂದ ನೇರವಾಗಿ ಮನೆಗಳ ನಲ್ಲಿಗಳಿಗೆ ಬರುವ ಕಲುಷಿತ ನೀರನ್ನು ಸೇವನೆ ಮಾಡುವ ಪರಿಣಾಮ ಮಕ್ಕಳು ಸೇರಿ ಗ್ರಾಮದ ಹಲವರಿಗೆ ಶೀತ, ಜ್ವರ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಆರು ವರ್ಷಗಳ ಹಿಂದೆ ಗ್ರಾಪಂ ತೆಗೆಸಿದ ಕೊಳವೆ ಬಾವಿಯಲ್ಲಿ 5ಇಂಚು ನೀರು ಇದ್ದು, ಏಪ್ರಿಲ್-ಮೇ ತಿಂಗಳಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸೆಲೆ ಕಡಿಮೆಯಾಗಿತ್ತು. ಬೋರ್‌ವೆಲ್‌ನಿಂದ ಸಿಲ್ಟ್ ಬರುತ್ತಿದೆ. ಕಳಪೆ ಗುಣಮಟ್ಟದ ಕೇಸಿಂಗ್ ಪೈಲ್ ಅಳವಡಿಸಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈಗಿರುವ ಬೋರ್‌ವೆಲ್‌ ಬಿಟ್ಟರೆ, ಯಾವುದೇ ನೀರಿನ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಕಲುಷಿತ ನೀರನ್ನು ಸಂಗ್ರಹಿಸಿ, 2-3 ಗಂಟೆ ಬಿಟ್ಟು ಮಣ್ಣು ತಳ ಸೇರಿದ ನಂತರ ಮೇಲಿನ ತಿಳಿ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಭಿಯಂತರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಾಳೆ, ನಾಡಿದ್ದು ಎಂದು ಹೇಳುತ್ತಾ ದಿನ ತಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮದಲ್ಲಿ ಉದ್ಭವಿಸಿರುವ ಕುಡಿವ ನೀರಿನ ಸಮಸ್ಯೆ ಕುರಿತು ತಿಳಿಸಲು ಗ್ರಾಮದಲ್ಲಿ ಪುರಸಭಾ ಸದಸ್ಯರಿಲ್ಲ. ಕ್ಷೇತ್ರದ ಶಾಸಕರು ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಶುದ್ಧ ನೀರು ಪೂರೈಸದೆ ವಂಚನೆ

ಈ ಹಿಂದೆ ಕೊಡಕಣಿ ಗ್ರಾಪಂಗೆ ಸೇರಿದ್ದ ಶಿಗೇಹಳ್ಳಿ ಈಗ ಸೊರಬ ಪುರಸಭೆ ವ್ಯಾಪ್ತಿಗೆ ಒಳಪಟ್ಟು 5 ವರ್ಷಗಳು ಕಳೆದಿವೆ. ಆರು ವರ್ಷ ಹಿಂದೆ ಗ್ರಾಪಂ ಅನುದಾನದಲ್ಲಿ ಕೊರೆಸಿದ್ದ ಕೊಳವೆ ಬಾವಿ ಇಡೀ ಗ್ರಾಮಕ್ಕೆ ನೀರು ಒದಗಿಸುತ್ತಿದೆ. ಆದರೆ ಕಲುಷಿತಗೊಂಡಿದೆ. ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿವೆ. ಗ್ರಾಮಸ್ಥರು ಕೆಮ್ಮು, ಶೀತ, ಜ್ವರದಿಂದ ಬಳಲುವಂತಾಗಿದೆ. ಪುರಸಭೆ ವರ್ಷಕ್ಕೆ ₹1,680 ನೀರು ಕಂದಾಯವಾಗಿ ವಸೂಲಿ ಮಾಡುತ್ತದೆ. ಆದರೆ ಶುದ್ಧ ಕುಡಿವ ನೀರು ಸರಬರಾಜು ಮಾಡದೆ ಗ್ರಾಮಸ್ಥರನ್ನು ವಂಚಿಸುತ್ತಿದೆ. ಕಲುಷಿತ ನೀರು ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಿಗೇಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಯಪ್ಪ ತಿಳಿಸಿದ್ದಾರೆ.