ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಲೋಕಪಾವನಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿ ಅಲ್ಲಿಂದ ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕುರಹಟ್ಟಿ ಬಳಿಯ ಸುಂಕಾತೊಣ್ಣೂರು ಏತನೀರಾವರಿ ಯೋಜನೆಯೂ ಆರಂಭಗೊಂಡು ವರ್ಷ ಕಳೆದರೂ ಯೋಜನೆಯಿಂದ ನೀರೆತ್ತಿ ಕೆರೆಕಟ್ಟೆಗಳನ್ನು ಭರ್ತಿ ಮಾಡದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ನೂರಾರು ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸ್ಥಳದಲ್ಲಿಯೇ ನಿಂತು ಮೋಟಾರ್ ಆರಂಭಿಸಿದರು.

ಸುಂಕಾತೊಣ್ಣೂರು ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ 30 ಕೋಟಿ ರು. ವೆಚ್ಚದಲ್ಲಿ ಕುರಹಟ್ಟಿ ಗ್ರಾಮದ ಬಳಿ ಲೋಕಪಾವನಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿ ಏತನೀರಾವರಿ ಯೋಜನೆ ಮಾಡಲಾಗಿದೆ. ಈ ಯೋಜನೆ ಆರಂಭಗೊಂಡು ಒಂದು ವರ್ಷವಾಗಿದೆ. ಇಲ್ಲಿಯವರೆಗೂ ಯೋಜನೆಯಿಂದ ನೀರೆತ್ತಿ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ಉತ್ತಮ ಮಳೆಯಾಗಿ ಚೆಕ್ ಡ್ಯಾಂನಲ್ಲಿ ನೀರು ತುಂಬಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಮೋಟಾರ್ ಆನ್ ಮಾಡಿ ನೀರು ತುಂಬಿಸಿದಿದ್ದರೆ ಕೆರೆಕಟ್ಟೆಗಳು ತುಂಬಿ ಭರ್ತಿಯಾಗುತ್ತಿದ್ದವು. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ತುಂಬಿಸುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಸ್ಥಳದಲ್ಲಿಯೇ ನಿಂತು ಮೋಟಾರ್ ಆನ್ ಮಾಡಿಸಿ ಬಳಿಕ ಸ್ಥಳದಿಂದ ತೆರಳಿದರು. ಸಿ.ಎಸ್.ಪುಟ್ಟರಾಜು ಅವರ ಕಾರ್‍ಯಕ್ಕೆ ಪಕ್ಷಾತೀತವಾಗಿ ಕಾರ್‍ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಲೋಕಪಾವನಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿ ಅಲ್ಲಿಂದ ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಲಾಗಿತ್ತು ಎಂದರು.

ಈ ಯೋಜನೆಗೆ ವಿಸಿ ನಾಲೆಯಿಂದ 14 ಕ್ಯುಸೆಕ್ ನೀರನ್ನು ಸಹ ಬಳಕೆ ಮಾಡಿಕೊಳ್ಳಲು ಸಹ ಅವಕಾಶ ನೀಡಲಾಗಿದೆ. ಜತೆಗೆ 24 ಗಂಟೆ ವಿದ್ಯುತ್ ವ್ಯವಸ್ಥೆ ಕಲ್ಲಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕವನ್ನು ಸಹ ಕಲ್ಪಿಸಲಾಗಿದೆ. ಆದರೆ, ವ್ಯವಸ್ಥೆಯ ಲೋಪದಿಂದ ನೀರು ಎತ್ತಿ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ ಎಂದರು.

ರೈತರು, ಸಾರ್ವಜನಿಕರ ಒತ್ತಾಯದ ಮೇರೆಗೆ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏತ ನೀರಾವರಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಸೂಚಿಸಲಾಗಿದೆ. ಲೋಕಪಾವನಿ ನದಿಯಿಂದ ವ್ಯರ್ಥವಾಗಿ ನೀರು ಹರಿದು ನದಿ ಸೇರುತ್ತಿತ್ತು. ಆ ಹಿನ್ನೆಲೆಯಲ್ಲಿ ಇಲ್ಲೊಂದು ಚೆಕ್ ಡ್ಯಾಂ ನಿರ್ಮಿಸಿ ನೀರಾವರಿ ವಂಚಿತ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಏತ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಐದು ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಇಲ್ಲವಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ತಾಲೂಕಿನಲ್ಲಿ ಇರುವ ಎಲ್ಲಾ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದೇ ವೇಳೆ ಜೆಡಿಎಸ್ ಮುಖಂಡರಾದ ಉದ್ಯಮಿ ಶಿವಕುಮಾರ್, ಕನಗನಮರಡಿ ಸೊಸೈಟಿ ಮಾಜಿ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ, ಪಾರ್ಥಸಾರತಿ, ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಸಣ್ಣ ನೀರಾವರಿ ಎಇ ದರ್ಶನ್, ಎಂಜಿನಿಯರ್ ಪುನೀತ್ ಸೇರಿದಂತೆ ಹಲವರು ಹಾಜರಿದ್ದರು.