ಬರ ನಿರ್ವಹಣೆಗೆ ಅಧಿಕಾರಿಗಳು ಸಜ್ಜಾಗಿ: ಸಚಿವ ಎಸ್ಸೆಸ್ಸೆಂ

| Published : Nov 22 2023, 01:00 AM IST

ಬರ ನಿರ್ವಹಣೆಗೆ ಅಧಿಕಾರಿಗಳು ಸಜ್ಜಾಗಿ: ಸಚಿವ ಎಸ್ಸೆಸ್ಸೆಂ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ

ಜಗಳೂರು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ, ಕುಡಿಯುವ ನೀರು, ದನ, ಕರುಗಳಿಗೆ ಮೇವು, ಸರ್ಕಾರದ ಗ್ಯಾರಂಟಿ ಯೋಜನೆ ಸೌಲಭ್ಯಗಳು, ರೈತರಿಗೆ ಬರ ಪರಿಹಾರ ಸಮರ್ಪಕವಾಗಿ ಸಿಗುವಂತೆ ಅಧಿಕಾರಿಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ೨೦೨೩-೨೪ ನೇ ಸಾಲಿನ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬರಗಾಲ ಇರುವುದರಿಂದ ಜಗಳೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿ.ಸಿ.ರಸ್ತೆಗಳು, ಕಾಪೌಂಡಗಳು, ಸರ್ಕಾರಿ ಕಟ್ಟಡಗಳ ನಿರ್ಮಿಸುವ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿದರು.

ರೈತರು ಕಟ್ಟಿದ ಬೆಳೆ ವಿಮೆ, ಬೆಳೆ ಪರಿಹಾರ ರೈತರ ಖಾತೆಗಳಿಗೆ ಸಮರ್ಪಕವಾಗಿ ಜಮಾ ಆಗುವಂತೆ ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಅನಾವಶ್ಯಕ ರಜೆ ಪಡೆಯದೆ ಕೆಲಸ ನಿರ್ವಹಿಸಲು ಸೂಚಿಸಿದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ ಬರದಿಂದಾಗಿ ಕುಡಿಯುವ ನೀರು, ದನಕರುಗಳಿಗೆ ಮೇವು ಸಂಗ್ರಹಣೆ ಹಾಗೂ ರೈತರು , ಕೂಲಿ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಹನುಮಂತಾಪುರ ಗ್ರಾಮ ಪಂಚಾಯಿತಿ ಪಿಡಿಒ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಪಂಚಾಯಿತಿಯ ಎಲ್ಲಾ ಪಿಡಿಒಗಳು ಗ್ರಾಮ ಪಂಚಾಯಿತಿಗಳಲ್ಲಿದ್ದು ಕೆಲಸ ನಿರ್ವಹಿಸಲು ಸೂಚಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೆಳಗಿನ ಕಟ್ಟಡ ಬೀಳುವ ಹಂತದಲ್ಲಿದ್ದು, ಹಾಗೆಯೇ ಸ್ವಚ್ಛತೆ ಕಾಪಾಡುತ್ತಿಲ್ಲ. ಡಯಾಲಿಸಸ್, ಫಿಜಿಷಿಯನ್ ವೈದ್ಯರಿಲ್ಲದೇ ರೋಗಿಗಳಿಗೆ ತೊಂದರೆಯಾಗಿದೆ ಸಚಿವರ ಗಮನಕ್ಕೆ ತಂದರು.

ಕುಡಿವ ನೀರು ಬಗ್ಗೆ ಮುಂಜಾಗೃತರಾಗಿರಿ:

ಜಗಳೂರು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಮುಂಜಾಗೃತವಾಗಿ ಖಾಸಗಿ ಬೋರ್‌ವೆಲ್ ಮಾಲೀಕರಿಂದ ಒಪ್ಪಂದ ಮಾಡಿಸಬೇಕು. ಕೂಲಿಕಾರರಿಗೆ ಕೂಲಿ ಸಿಗುವಂತೆ ಕೆಲಸ ನಿರ್ವಹಿಸುವ ಹೊಣೆ ಪಿಡಿಒಗಳದ್ದು, ತಮ್ಮ ತಮ್ಮ ಇಲಾಖೆ ಅಧಿಕಾರಿಗಳು ಏನಾದರು ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು ಎಂದರು.

ಕೃಷಿ, ತೋಟಗಾರಿಕೆ, ಪಶು, ಕುಡಿಯುವ ನೀರು ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗಳ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್‌ ಇಟ್ನಾಳ್‌, ಅಪಾರ ಜಿಲ್ಲಾಧಿಕಾರಿ ಲೋಕೇಶ್, ಎಸಿ ದುರ್ಗಾಶ್ರೀ, ತಹಸೀಲ್ದಾರ್ ಸಯೀದ್ ಕಲೀಮ್‌ವುಲ್ಲಾ, ಇಒ ಕರಿಬಸಪ್ಪ ಸೇರಿ ಇತರರಿದ್ದರು. ನೀರಿನ ಘಟಕ ಸದಾ ಸುಸ್ಥಿತಿಯಲ್ಲಿರಲಿ

ಜಗಳೂರು ತಾಲೂಕಿನಲ್ಲಿ ಪ್ಲೋರೈಡ್ ಹೆಚ್ಚಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ೫೭ ಕೆರೆಗಳ ನೀರು ತುಂಬಿಸುವ ಯೋಜನೆ ಕಾಮಗಾರಿ ಬರದಿಂದ ನಡೆಯುತ್ತಿದ್ದು, ಹಲವು ಕೆರೆಗಳಿಗೆ ನೀರು ಬರುತ್ತಿದೆ. ಭದ್ರಾ ಮೇಲ್ದಂಡೆ ಕಾಮಗಾರಿಗಳು ಪೂರ್ಣವಾಗಿ ಕೆರೆಗಳಿಗೆ ನೀರು ಬಂದರೆ ರೈತರು ಬೆಳೆ ಬೆಳೆಯಲು ಅನುಕೂಲವಾಗಲಿದೆ.

ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ