ಸಾರಾಂಶ
ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಅಲೆದಾಡಿಸಬೇಡಿ: ಶಾಸಕ ಗೋವಿಂದಪ್ಪ ತಾಕೀತುಕನ್ನಡಪ್ರಭ ವಾರ್ತೆ ಹೊಸದುರ್ಗ
ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಅಲೆದಾಡಿಸಬೇಡಿ. ತಮ್ಮ ಇತಿಮಿತಿಯನ್ನು ಅರಿತು ಕೆಲಸ ಮಾಡಿ. ಇಲ್ಲಿಯವರೆಗೆ ಹೇಗೆ ಕೆಲಸ ಮಾಡಿದ್ದೀರಾ ಎನ್ನುವುದು ಬೇಡ. ಇನ್ನು ಮುಂದೆ ಹೇಗೆ ಕೆಲಸ ಮಾಡುತ್ತೀರಾ ಎನ್ನುವುದು ಮುಖ್ಯ. ಒಂದು ವೇಳೆ ಕೆಲಸ ಮಾಡಲು ಇಷ್ಠವಿಲ್ಲದಿದ್ದರೆ ನೀವಾಗಿಯೇ ನನ್ನ ಕ್ಷೇತ್ರದಿಂದ ಹೊರಟು ಹೋಗಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕಂದಾಯ, ಉಪನೋದಣಿ ಹಾಗೂ ಭೂ ಮಾಪನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಭೂ ಮಾಪನ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ರೈತರ ಜಮೀನಿನ ಸರ್ವೇ ಕಾರ್ಯ ಬಹಳಷ್ಟು ತಡ ಆಗುತ್ತಿದೆ. ಇದರಿಂದ ಸಾರ್ವಜನಿಕರು ನಮ್ಮ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಇಂದು ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಈ ಮೊದಲೇ ಮಾಹಿತಿ ನೀಡಿದ್ದರೂ ಸಹ, ಗುತ್ತಿಗೆ ಆಧಾರದ ಸರ್ವೇಯರ್ ಗಳು ಸಭೆಗೆ ಹಾಜರಾಗಿಲ್ಲ. ಅಧಿಕಾರಿಗಳ ಆದೇಶ ಪಾಲಿಸದ ಇಂತಹ ಸಿಬ್ಬಂದಿ ಸಾರ್ವಜನಿಕರ ಕೆಲಸಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ರೈತರು ತಮ್ಮ ಜಮೀನಿನ ತತ್ಕಾಲ್ ಪೋಡಿಗೆ ಅರ್ಜಿ ಹಾಕಿದಾಗ ಸರ್ವೇಯರ್ ಗಳು ರೈತರಿಗೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ನೆರೆಹೊರೆ ರೈತರು ಹಾಗೂ ಸಂಬಂಧಿಕರ ನಡುವೆ ವ್ಯಾಜ್ಯ ತಂದಿಡುತ್ತಿದ್ದಾರೆ. ಈ ಬಗ್ಗೆ ನನಗೆ ನಿತ್ಯವೂ ದೂರು ಬರುತ್ತಲೇ ಇವೆ. ಇಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.ಕಂದಾಯ ಇಲಾಖೆ ಹಾಗೂ ಉಪನೋಂದಣಿ ಕಚೇರಿ ಪ್ರಗತಿ ಕಾರ್ಯವು ಸರ್ವೇ ಇಲಾಖೆಯನ್ನು ಅವಲಂಬಿಸಿದೆ. ಹಾಗಾಗಿ ಸರ್ವೇ ಇಲಾಖೆ ಯವರು ಸರಿಯಾಗಿ ಕೆಲಸ ಮಾಡಿದರೆ ಕಂದಾಯ ಇಲಾಖೆ ಪ್ರಕರಣಗಳು ಕಡಿಮೆ ಆಗುತ್ತವೆ. ಇಲ್ಲದಿದ್ದರೆ ಕಡತಗಳು ಬಾಕಿ ಉಳಿಯುತ್ತವೆ. ಸರ್ವೇ ಇಲಾಖೆ ತಾತ್ಸಾರ ಸಹಿಸುವುದಿಲ್ಲ. ಪೋಡಿಮುಕ್ತ ಗ್ರಾಮ ಘೋಷಣೆ ಮಾಡಿದ ಮೇಲೆ ಅಲ್ಲಿನ ಜನರನ್ನು ಸೇರಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ಬಗ್ಗೆ ನಮಗೆ ಒಂದು ಗ್ರಾಮದ ಮಾಹಿತಿಯನ್ನು ಕೊಟ್ಟಿಲ್ಲ. ಇಟ್ಟಿಗೆಹಳ್ಳಿ ಸಿಮೆಂಟ್ ಫ್ಯಾಕ್ಟರಿ ವ್ಯಾಜ್ಯ ಹೈಕೋರ್ಟ್ ನಲ್ಲಿದೆ. ಯಾವುದೇ ಕಾರಣಕ್ಕೂ ಮತ್ತೆ ಆ ಸಿಮೆಂಟ್ ಫ್ಯಾಕ್ಟರಿಯವರಿಗೆ ಅವಕಾಶ ಕೊಡಕೂಡದು ಎಂದು ತಹಸೀಲ್ದಾರ್ ಅವರಿಗೆ ತಾಕೀತು ಮಾಡಿದರು. ಉಪನೋಂದಣಿ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ಲೇಔಟ್ ಮಾಲೀಕರ ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು. ಆಸ್ತಿ ಇ-ಸ್ವತ್ತು ಇರುವ ಹಾಗೂ ಇಲ್ಲದಿರುವುದನ್ನು ನೋಂದಣಿಗೆ ಮಾಡಿಕೊಡಲು ನಿಮ್ಮ ಕಚೇರಿಯಲ್ಲಿ ನಿಗದಿಪಡಿಸಿರುವ ದರ ಪಟ್ಟಿ ಕೊಡಿ. ಆಸ್ತಿ ಮಾಟ್ ಗೇಜ್ ಮಾಡಿಕೊಡಲು ಸಾಕಷ್ಟು ಹಣ ಪಡೆಯುತ್ತಿದ್ದೀರಿ. ನಮ್ಮದೇ ಆಸ್ತಿಗೆ ಲಕ್ಷಗಟ್ಟಲೇ ಲಂಚ ಪಡೆದಿದ್ದೀರಿ. ಈ ಅವ್ಯವಹಾರ ಇಂದಿಗೆ ನಿಲ್ಲಬೇಕು. ಎಲ್ಲದಕ್ಕೂ ಒಂದು ಚೌಕಟ್ಟು ಇರುತ್ತದೆ. ಅದನ್ನು ಮೀರಿ ಯಾರು ನಡೆದುಕೊಳ್ಳಬಾರದು. ಇನ್ನಾದರೂ ಅರ್ಥ ಮಾಡಿಕೊಂಡು ನಡೆದುಕೊಳ್ಳದಿದ್ದರೆ ಸಹಿಸುವುದಿಲ್ಲ ಖಡಕ್ ಎಚ್ಚರಿಕೆ ನೀಡಿದರು. ಜನರನ್ನು ಅಲೆದಾಡಿಸದಂತೆ ಕೆಲಸ ಮಾಡಿ: ಸಭೆಯಲ್ಲಿ ತಿಳಿಸಿರುವ ಕೆಲಸವನ್ನು ಕಂದಾಯ ಇಲಾಖೆ ತುರ್ತಾಗಿ ಮಾಡಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಿ, ಜನರನ್ನು ಅಲೆದಾಡಿಸದಂತೆ ಕೆಲಸ ಮಾಡಿಕೊಡಬೇಕು. ತಾಲೂಕು ಆಡಳಿತದ ವಿರುದ್ಧ ಶಾಸಕರಾದ ಗೋವಿಂದಪ್ಪನವರಿಗೆ ದೂರು ಹೋದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದರೆ ಸಹಿಸುವುದಿಲ್ಲ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಅವರು ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಭೂಮಾಪನ ಇಲಾಖೆ ಪ್ರಭಾರ ಅಧಿಕಾರಿ ಏಕನಾಥ್ ಸೇರಿ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.