ಸಾರಾಂಶ
ಹಾನಗಲ್ಲ: ಅಂಬೇಡ್ಕರ ಸಮುದಾಯ ಭವನಗಳನ್ನು ತಾಲೂಕಿನ ದಲಿತರ ಉಪಯೋಗಕ್ಕೆ ಕೊಡುವಲ್ಲಿ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ. ದಲಿತರ ಕುಂದುಕೊರತೆಯ ಮನವಿಗಳನ್ನು ತಾಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ದಲಿತರಿಗೆ ಸ್ಮಶಾನವಿಲ್ಲ, ಕುಡಿಯುವ ನೀರಿನ ಸಮಸ್ಯೆಗಳಿವೆ. ವಾಣಿಜ್ಯ ಮಳಿಗೆಗಳನ್ನು ನೀಡುತ್ತಿಲ್ಲ ಎಂಬ ಹಲವು ಸಮಸ್ಯೆಗಳನ್ನು ಮುಂದಿಟ್ಟು ಅಸಮಾಧಾನ ವ್ಯಕ್ತಪಡಿಸಿದರು.ಮಂಗಳವಾರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಹಸೀಲ್ದಾರ್ ಎಸ್. ರೇಣುಕಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮುಖಂಡರು, ದಲಿತ ಸಮುದಾಯದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಿಕ್ಕಿರಿದು ಕುಂದುಕೊರತೆಗಳನ್ನು ಹೇಳಿಕೊಂಡರು.ಹಾನಗಲ್ಲಿನಲ್ಲಿರುವ ಅಂಬೇಡ್ಕರ ಸಭಾಭವನವನ್ನು ದಲಿತರಿಗಾಗಿ ಮೀಸಲಿಡಬೇಕು. ಈ ಬೇಡಿಕೆಗೆ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಇದು ಹಲವು ವರ್ಷಗಳ ಸಮಸ್ಯೆ. ಇದರ ಬಾಡಿಗೆ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಈ ಸಮಸ್ಯೆ ಪರಿಹರಿಸದ ಹೊರತು ಮುಂದಿನ ಸಭೆ ನಡೆಯಲು ಬಿಡುವುದಿಲ್ಲ ಎಂದು ಮುಖಂಡ ಹನುಮಂತಪ್ಪ ಯಳ್ಳೂರ ಸೇರಿದಂತೆ ಹಲವು ನಾಯಕರು ಪಟ್ಟು ಹಿಡಿದರು. ಆದರೆ ಈ ಜಾಗ ಒಂದು ದೇವಸ್ಥಾನದ ಆಸ್ತಿಯಾಗಿದ್ದು, ಕಟ್ಟಡ ಕಟ್ಟುವಾಗ ಜಾಗವನ್ನು ಪುರಸಭೆ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಪಡೆದಿಲ್ಲ. ಅದರ ದಾಖಲೆಗಳೂ ಇಲ್ಲ. ಈಗ ಇದಕ್ಕೆ ತಾಂತ್ರಿಕ ಸಮಸ್ಯೆಗಳಿವೆ ಎಂದು ತಹಸೀಲ್ದಾರರು ವಿವರಿಸಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಪ್ಪ ಹಿರೇಮಠ ವಿವರಣೆ ನೀಡಿ, ಈಗಾಗಲೇ ಹೊಸ ಅಂಬೇಡ್ಕರ ಭವನಕ್ಕಾಗಿ ಪುರಸಭೆಗೆ ಹೊಸ ಜಾಗಕ್ಕಾಗಿ ಬೇಡಿಕೆ ಇಡಲಾಗಿದೆ. ಪುರಸಭೆ ನೀಡುವ ಜಾಗದಲ್ಲಿ ಹೊಸ ಅಂಬೇಡ್ಕರ ಭವನ ಕಟ್ಟಲು ಯೋಜಿಸಲಾಗಿದೆ ಎಂದು ಮನವರಿಕೆ ಮಾಡಿದರು. ಇದರೊಂದಿಗೆ ಶಂಕ್ರಿಕೊಪ್ಪ ಗ್ರಾಮದ ಅಂಬೇಡ್ಕರ ಭವನ ಹಾಗೂ ರೇಣುಕಾಚಾರ್ಯರ ಗುಡಿಯ ಸಮಸ್ಯೆಯನ್ನೂ ಪರಿಹರಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಶಂಕ್ರಿಕೊಪ್ಪ ಗ್ರಾಮದಲ್ಲಿ ದಲಿತರಿಗೆ ಆಘೋಷಿತ ಬಹಿಷ್ಕಾರ ಹಾಕಲಾಗಿದೆ. ನಮಗೆ ಇಲ್ಲಿ ನ್ಯಾಯ ಒದಗಿಸಬೇಕು ಎಂದು ತಹಸೀಲ್ದಾರರಿಗೆ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಯಾವುದೇ ಸಮುದಾಯಕ್ಕೆ ಅಥವಾ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕುವ ಹಕ್ಕು ಯಾರಿಗೂ ಇಲ್ಲ. ಇದು ಹೀಗೆ ಮುಂದುವರಿದಿದ್ದರೆ ಖಂಡಿತ ಕಾನೂನು ಕ್ರಮಕ್ಕೆ ಸಿದ್ಧ. ಕೂಡಲೇ ದೂರು ನೀಡಿ. ನಾವೇ ಖುದ್ದಾಗಿ ನಿಂತು ಸಮಸ್ಯೆ ಪರಿಹರಿಸುತ್ತೇವೆ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಭರವಸೆ ನೀಡಿದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ವಸತಿನಿಲಯದಲ್ಲಿ ವಿಶೇಷ ಪಾಠ ಯೋಜನೆ ನಡಯುತ್ತಿಲ್ಲ. ಇದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅನಾನುಕೂಲವಾಗಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಗಂಗಮ್ಮ ಹಿರೇಮಠ, ತಿಂಗಳಿಗೆ ₹1 ಸಾವಿರ ಗೌರವಧನದಲ್ಲಿ ವಿಶೇಷ ಪಾಠಕ್ಕಾಗಿ ಯಾರೂ ಬರುತ್ತಿಲ್ಲ. ಆದರೂ ನಮ್ಮ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು.ಭೋವಿ ವಡ್ಡರ ಸಮುದಾಯದವರಿಗೆ ಗಣಿಗಾರಿಕೆಗೆ ಜಾಗ ನೀಡಿ, ಭೋವಿ ಭವನಕ್ಕೆ ಜಾಗ ಕೊಡಿ. ಹಾನಗಲ್ಲ ಪಟ್ಟಣದಲ್ಲಿಯೇ ನೂತನ ವಾಲ್ಮೀಕಿ ಭವನ ನಿರ್ಮಿಸಿ. ತಾಪಂ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ ಮೂರ್ತಿ ನಿರ್ಲಕ್ಷ್ಯಕ್ಕೊಳಗಾಗಿದೆ. ದಲಿತರ ಕೆಲಸಗಳಿಗೆ ತಹಸೀಲ್ದಾರ್ ಕಚೇರಿಯಲ್ಲಿ ಸರಿಯಾದ ಸ್ಪಂದನೆ ಇಲ್ಲ. ಅಕ್ಕಿಆಲೂರಿನಲ್ಲಿ ಕೊರಚ ಸಮುದಾಯದವರು ವಾಸಿಸುವ ಗುಡಿಸಲುಗಳನ್ನು ಖಾದಿ ಗ್ರಾಮೋದ್ಯೋಗ ಇಲಾಖೆಯವರು ನೆಲಸಮ ಮಾಡಿದ್ದಾರೆ. ಅಲೆಮಾರಿ ಜನಾಂಗದ ವಸತಿಗೆ ಕುಡಿಯಲು ನೀರಿಲ್ಲ. ತಾಲೂಕು ಆಡಳಿತದಲ್ಲಿ ದಲಿತರಿಗೆ ಗೌರವವಿಲ್ಲ. ಕಚೇರಿಗೆ ಹೋದರೆ ನಿರ್ಲಕ್ಷ್ಯದಿಂದ ಅಧಿಕಾರಿಗಳು ವರ್ತಿಸುತ್ತಾರೆ ಎಂಬೆಲ್ಲ ದೂರುಗಳನ್ನು ತಹಸೀಲ್ದಾರ್ ಆಲಿಸಿದರು. ಆದರೆ ಯಾವುದೇ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಸಿಗಲಿಲ್ಲ.ಮುಖಂಡರಾದ ಪುಟ್ಟಪ್ಪ ನರೇಗಲ್ಲ, ರಾಜು ಶಿರಪಂಥಿ, ಹನುಮಂತಪ್ಪ ಯಳ್ಳೂರ, ರಾಮು ಯಳ್ಳೂರ, ಮಾರುತಿ ಪುರ್ಲಿ, ಕೊಟ್ರಪ್ಪ ಕುದರಿಸಿದ್ದನವರ, ಮಹೇಶ ಹರಿಜನ, ಸುರೇಶ ನಾಗಣ್ಣನವರ, ಹನುಮಂತಪ್ಪ ಕೋಣನಕೊಪ್ಪ, ನಿಂಗಪ್ಪ ಗಾಳೆಮ್ಮನವರ, ನಿಂಗಪ್ಪ ಹೊಸಮನಿ, ಉಮೇಶ ಮಾಳಗಿ, ನೀಲಪ್ಪ ದೊಡ್ಡಮನಿ, ಪರಶುರಾಮ ಹುಳ್ಳಿಕಾಸಿ, ಮಂಜು ಕರ್ಜಗಿ ಮೊದಲಾದವರು ತಮ್ಮ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.ಪುರಸಭೆಯ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಬಸವರಾಜ ಹಳವಣ್ಣನವರ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಾದ ರಾಮು ಬೈಲಸೀಮೆ, ದೇವರಾಜ ಎಸ್., ಚಂದ್ರಶೇಖರ ನೆಗಳೂರು, ಎಸ್. ಆನಂದ, ಗಣೇಶ ಶೆಟ್ಟರ, ಗಿರೀಶ ರೆಡ್ಡೇರ, ಎ.ಪಿ. ಸುಗಂಧಿ ಇತರರು ಪಾಲ್ಗೊಂಡಿದ್ದರು.ಸಮಸ್ಯೆಗಳಿಗೆ ಶೀಘ್ರ ಪರಿಹಾರ...
ದಲಿತ ಮುಖಂಡರಿಗೆ ಸರಿಯಾಗಿ ಮಾಹಿತಿ ನೀಡದೇ ಸಭೆ ನಡೆಸುತ್ತಿದ್ದಿರಿ ಎಂಬ ಕಾರಣಕ್ಕೆ ಎರಡು ಬಾರಿ ಮುಂದೂಡಿದ ಸಭೆ ಸುದೀರ್ಘ ಚರ್ಚೆ ಅಹವಾಲು ಸ್ವೀಕಾರ, ಹಲವು ಆರೋಪಗಳ ನಡುವೆಯೇ ಸುಖಾಂತ್ಯವಾಯಿತು. ದಲಿತ ಮುಖಂಡರ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆಯನ್ನು ತಹಸೀಲ್ದಾರ್ ಎಸ್. ರೇಣುಕಾ ನೀಡುವ ಮೂಲಕ ಸಭೆ ಪೂರ್ಣಗೊಂಡಿತು.