ಸಾರಾಂಶ
ಬೇಸಿಗೆ ಕಾಲವಾದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗ ರುಜಿನಗಳಿಗೆ ಆಸ್ಪದವಾಗುತ್ತಿದೆ. ಹೀಗಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಬಡಾವಣೆ ನಿವಾಸಿಗಳು ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಚರಂಡಿಗಳನ್ನು ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಸೋಮನಹಳ್ಳಿ ಗ್ರಾಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕ್ರಮ ವಿರೋಧಿಸಿ ಮಲ್ಲಯ್ಯ ನಗರ ಬಡಾವಣೆ ನಿವಾಸಿಗಳು ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಬೇಸಿಗೆ ಕಾಲವಾದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗ ರುಜಿನಗಳಿಗೆ ಆಸ್ಪದವಾಗುತ್ತಿದೆ. ಹೀಗಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಬಡಾವಣೆ ನಿವಾಸಿಗಳು ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದರು.
ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಲ್ಲಯ್ಯ ನಗರ ಬಡಾವಣೆ ನಿವಾಸಿಗಳು ತಾವೇ ಚರಂಡಿಗೆ ಇಳಿದು ತ್ಯಾಜ್ಯ ಮತ್ತುಹೂಳು ತೆಗೆಯುವ ಮೂಲಕ ಗ್ರಾಪಂ ವಿರುದ್ಧ ತೀವ್ರ ಅಸಹನೆ ವ್ಯಕ್ತಪಡಿಸಿದರು.ಗ್ರಾಪಂನವರು ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿಗಳ ಸುಚಿತ್ವ ಕಾಪಾಡುವ ಜೊತೆಗೆ ಕ್ರಿಮಿನಾಶಕ ಸಿಂಪಡಿಸಬೇಕು. ಇಲ್ಲವಾದಲ್ಲಿ ಗ್ರಾಪಂ ಎದುರು ತ್ಯಾಜ್ಯ ಸುರಿಯುವ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಡಾವಣೆ ನಿವಾಸಿಗಳು ಎಚ್ಚರಿಸಿದರು.
ಗ್ರಾಪಂ ಅಧಿಕಾರಿಗಳು ಗ್ರಾಮಗಳ ಹಬ್ಬದ ಸಂದರ್ಭದಲ್ಲಿ ಶುಚಿತ್ವದ ಹೆಸರಿನಲ್ಲಿ ಲಕ್ಷಾಂತರ ರು ಬಿಲ್ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗ್ರಾಪಂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.