ಸಾರಾಂಶ
ಐತಿಹಾಸಿಕ ಹಿರೇಬೆಣಕಲ್‌ನ ಮೊರೇರ ಬೆಟ್ಟದ ಸನಿಹದಲ್ಲಿರುವ (ಬೋಳಮ್ಮನ) ಕೆರೆ ವಿಸ್ತರಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ಗ್ರಾಮಸ್ಥರು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥಗೆ ಮನವಿ ಸಲ್ಲಿಸಿದರು.
ಗಂಗಾವತಿ:
ತಾಲೂಕಿನ ಐತಿಹಾಸಿಕ ಹಿರೇಬೆಣಕಲ್‌ನ ಮೊರೇರ ಬೆಟ್ಟದ ಸನಿಹದಲ್ಲಿರುವ (ಬೋಳಮ್ಮನ) ಕೆರೆ ವಿಸ್ತರಿಸಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ.ಮಂಗಳವಾರ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ವಿನಾಃಕಾರಣ ಕೆರೆ ವಿಸ್ತರಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ನೀವು ವಿಪ ಸದಸ್ಯರಾಗಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಿ 10 ಕೆರಗಳ ಅಭಿವೃದ್ದಿಗೆ ತೆರಳಿ ₹ 125 ಕೋಟಿ ಅನುದಾನ ಮಂಜೂರು ಮಾಡಿಸಿ 5 ಕೆರೆ ಅಭಿವೃದ್ಧಿಗೆ ₹ 89 ಕೋಟಿ ಅನುದಾನ ನೀಡಲಾಗಿತ್ತು. ಪ್ರಸ್ತುತ ಹಿರೇಬೆಣಕಲ್‌ನ 4 ಎಕರೆ ಪ್ರದೇಶ ಕೆರೆ ಇದ್ದು ಇನ್ನೂ 1 ಎಕರೆ ಪ್ರದೇಶ ವಿಸ್ತರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ವಿವರಿಸಿದರು.
ಈ ಕೆರೆ ವಿಸ್ತರಿಸುವುದರಿಂದ ಜನರು, ಜಾನುವಾರು ಸೇರಿದಂತೆ ಪಕ್ಷಿ, ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ದೊರೆಯುತ್ತದೆ. ಈ ಕಾರಣಕ್ಕೆ ನೀರಾವರಿ ನಿಗಮದಿಂದ ದೇವಘಾಟ್ ಬಳಿ ನದಿಯಿಂದ ಕೆರೆಗೆ ಪೈಪ್ ಜೋಡಣೆ ಮೂಲಕ ನೀರು ಸಂಗ್ರಹಿಸಲಾಗುತ್ತದೆ. ಈಗ ಕೆರೆ ವಿಸ್ತರಿಸಿದರೆ ಹೆಚ್ಚಿನ ನೀರು ಸಂಗ್ರಹವಾಗುತ್ತದೆ ಎಂದು ಮನವಿ ಮಾಡಿದ್ದರು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು.ಆಗ ಎಚ್.ಆರ್. ಶ್ರೀನಾಥ, ಅರಣ್ಯ ಇಲಾಖೆ ಮತ್ತು ನೀರಾವರಿ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಗ್ರಾಮಸ್ಥರಾದ ವಿರೂಪಾಕ್ಷಪ್ಪ ಡಣಾಪುರ, ಪ್ರಹ್ಲಾದ ಹೇರೂರು, ವೀರೇಶ, ಫಕೀರಪ್ಪ ಪಿಂಗೇರಿ ಮೇಸ್ತ್ರಿ, ಹನುಮಂತಪ್ಪ ದಿದ್ಗಿ, ಕರಡಿ ಕಣ್ಮೇಶ, ವೆಂಕಟೇಶ ನಾಯಕ, ಹನುಮಂತಪ್ಪ ತಳವಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.