ಸಾರಾಂಶ
-ಉಡುವಳ್ಳಿ ಅಕ್ರಮ ಕಾಮಗಾರಿ ದೂರು ಆಧರಿಸಿ ಬೆಂಗಳೂರಿನಿಂದ ಪಂ.ರಾಜ್ ಇಲಾಖೆಯ ಅಧಿಕಾರಿ ತಂಡ ಭೇಟಿ
-------ಕನ್ನಡಪ್ರಭ ವಾರ್ತೆ ಹಿರಿಯೂರು: ಉಡುವಳ್ಳಿ ಗ್ರಾ.ಪಂ. ಕಾಮಗಾರಿ ಪರಿಶೀಲನೆಗೆ ಬೆಂಗಳೂರಿನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ತಂಡ ಉಡುವಳ್ಳಿಗೆ ಆಗಮಿಸಿತ್ತು. ಉಡುವಳ್ಳಿ ಗ್ರಾ.ಪಂ. ಭೇಟಿಯ ವೇಳೆ ಪಂಚಾಯಿತಿಯಲ್ಲಿನ ಸಮಗ್ರ ದಾಖಲೆ ಪರಿಶೀಲಿಸಿದ ಅಧಿಕಾರಿಗಳ ತಂಡವು ಈ ಹಿಂದೆ ನಡೆದ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೇ ಬಿಲ್ ಮಾಡುವ ಹುನ್ನಾರದ ಬಗ್ಗೆ ಸಮಗ್ರ ಪರಿಶೀಲನೆಯಲ್ಲಿ ತೊಡಗಿತ್ತು ಎನ್ನಲಾಗಿದೆ. ಪಂಚಾಯ್ತಿ ವ್ಯಾಪ್ತಿಯ ಅಜ್ಜಯ್ಯನಹಟ್ಟಿ ಗ್ರಾಮದ ಸನo 11 ರಲ್ಲಿನ ಬಾಲಪ್ಪನ ಜಮೀನಿನ ಹತ್ತಿರ ಗೋಕಟ್ಟೆ ನಿರ್ಮಾಣದ ಕಾಮಗಾರಿಯ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು 11-07-2024 ರಂದು ಜಿ.ಪಂ ಸಿಇಒ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಸನo 11 ರ ಕಾಮಗಾರಿ ಕಣ್ತಪ್ಪಿನಿಂದ ಮತ್ತೊಂದು ಸನಂ ನಲ್ಲಿ ಕೆಲಸ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಲಾಗುತ್ತಿದ್ದು, ಅದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಉಡುವಳ್ಳಿ ಗ್ರಾ.ಪಂ.ಯಲ್ಲಿ ಲಂಚ ತಾಂಡವಾಡುತ್ತಿದ್ದು, ಖಾತೆ ಬದಲಾವಣೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಸ್ಟಿಮೇಟ್ ಕೊಡಲು ಲಂಚ ತೆಗೆದು ಕೊಳ್ಳುತ್ತಿದ್ದು ಇದನ್ನು ತಡೆಯುವಂತೆ ಈ ಹಿಂದೆ ಇದ್ದ ತಾ.ಪಂ. ಸಿಇಒ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮದ ಸರ್ವೆ ನಂಬರ್ 11ರ ಹೆಸರಿನ ಕಾಮಗಾರಿಯನ್ನು ಮತ್ತೆಲ್ಲೋ ಮಾಡಿ ಬಿಲ್ ಮಾಡಿಕೊಳ್ಳಲು ಹೊರಟ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಕಾರ್ಯ ನಿರ್ವಹಣಾಧಿ ಕಾರಿಯವರಿಗೆ ಮನವಿ ಕೂಡ ಸಲ್ಲಿಸಿದ್ದು, ಪಿಡಿಒ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದರು. ಬುಧವಾರ ಬೆಂಗಳೂರಿನ ತಂಡ ಆಗಮಿಸಿ ಸಮಗ್ರ ಪರಿಶೀಲನೆಯಲ್ಲಿ ತೊಡಗಿತು. ದಾಖಲೆ ಮತ್ತು ಸ್ಥಳ ಪರಿಶೀಲನೆಯ ವರದಿಗಳು ಹೊಂದಾಣಿಕೆಯಾಗದ್ದನ್ನು ಅಧಿಕಾರಿಗಳು ಪ್ರಶ್ನಿಸಿದರು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆದು ಸತ್ಯಾoಶ ಹೊರಬರಬೇಕು ಎಂದು ಹೆಸರು ಹೇಳಲು ಇಚ್ಚಿಸದ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.---------
ಫೋಟೊ: 1,2ಉಡುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಕಾಮಗಾರಿ ನಡೆದಿವೆ ಎನ್ನುವ ದೂರಿನ ಆಧಾರದ ಮೇಲೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.