ಸಾರಾಂಶ
ಹೊಸದುರ್ಗ: ಸರ್ಕಾರದ ಪರವಾನಿಗೆಯಿಲ್ಲದೆ ಸಾಗಿಸುತ್ತಿದ್ದ ಬೃಹದಾಕಾರದ ಬ್ಲಾಕ್ ಗ್ರಾನೈಟ್ ಬಂಡೆ ಲಾರಿ ಸಮೇತ ಚಿತ್ರದುರ್ಗ-ತುಮಕೂರು ಗಡಿ ಭಾಗವಾದ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರದುರ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೃಹತ್ ಗಾತ್ರದ ಬಂಡೆ ಹೊಸದುರ್ಗ ತಾಲೂಕಿನ ಹೆಗ್ಗೆರೆ ಸಮೀಪದ ಹೀರೆಕೆರೆ ಅಂಗಳದಲ್ಲಿರುವ ಕರಿ ಕಲ್ಲು ಬಂಡೆ ಕ್ವಾರಿಯಿಂದ ತೆಗೆಯಲಾಗಿದ್ದು, ಚಿತ್ರದುರ್ಗ ಜಿಲ್ಲೆ ಗಣಿ ಅಧಿಕಾರಿಗಳು ಲಾರಿಯನ್ನು ಬೆನ್ನಟ್ಟಿ ತುಮಕೂರು ಜಿಲ್ಲೆಯ ಹುಳಿಯಾರು ಬಳಿ ತಡೆದಾಗ ಲಾರಿ ಚಾಲಕ ಮತ್ತು ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಂತರ ಚಿತ್ರದುರ್ಗ ಗಣಿ ಆಧಿಕಾರಿಗಳು ತುಮಕೂರು ಗಣಿ ಅಧಿಕಾರಿಗಳಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.6 ತಿಂಗಳಿಂದ ಅಧಿಕಾರಿಗಳಿಗೆ ಮಾಹಿತಿ ಇಲ್ಲ?:
ಕಳೆದ 6 ತಿಂಗಳ ಹಿಂದೆ ಜೈನ ಸಮುದಾಯದ ಮುನಿಗಳೊಬ್ಬರು ಹಾಸನ ಬಳಿ ಜೈನರಗುತ್ತಿ ಪ್ರದೇಶದಲ್ಲಿ ಹಳೆಯ ಜೈನ ಬಸದಿ ಹಾಳಾಗಿದ್ದು, ಅದರ ಪುನರ್ ಸ್ಥಾಪನೆ ಮಾಡುತ್ತಿರುವುದಾಗಿ, ಅಲ್ಲಿ ಬೃಹದಾಕಾರದ ಬಾಹುಬಲಿ ವಿಗ್ರಹ ಸ್ಥಾಪನೆ ಮಾಡಲು ಕಪ್ಪು ಶಿಲೆ ಬೇಕಾಗಿದ್ದು, ಇಲ್ಲಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಮುಖಂಡರೊಂದಿಗೆ ವಿಷಯ ಪ್ರಸ್ತಾಪಿಸಿದ್ದಾರೆ. ಆಗ ಮುಖಂಡರು ಈಗಾಗಲೇ ಈ ಭಾಗದಲ್ಲಿ ಸಾಕಷ್ಟು ಬಂಡೆ ತೆಗೆಯಲಾಗಿದೆ.ಇದಕ್ಕೆ ಜನರು ವಿರೋಧಿಸುತ್ತಾರೆ ಹಾಗಾಗಿ ಬೇಡ ಎಂದಿದ್ದಾರೆ. ಆಗ ಜೈನ ಮುನಿಗಳು ತಾಲೂಕಿನ ಕೆಲ ಜೈನ್ ಮುಖಂಡರುಗಳೊಂದಿಗೆ ಒತ್ತಾಯ ಮಾಡಿದ್ದರಿಂದ ಸ್ಥಳೀಯರು ಸುಮ್ಮನಾಗಿದ್ದಾರೆ. ಕಳೆದ 6 ತಿಂಗಳಿಂದ ಬೃಹದಾಕಾರದ ಯಂತ್ರಗಳ ಮೂಲಕ ಕ್ವಾರಿಯಲ್ಲಿ ತೆಗೆಯುತ್ತಿದ್ದರೂ ಸ್ಥಳೀಯ ಪೋಲೀಸರಿಗಾಗಲೀ, ಗಣೀ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗಾಗಲೀ ಗಮನಕ್ಕೆ ಬಾರದೆ ಇರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಹೆಗ್ಗರೆ ಬಳಿ ಕಲ್ಲು ಸಾಗಿಸುವಾಗ ಪೊಲೀಸರು ಇದ್ದರು: ಶನಿವಾರ ರಾತ್ರಿ ಕ್ವಾರಿ ಪ್ರದೇಶದಿಂದ ಕಲ್ಲು ಸಾಗಿಸುವಾಗ ಹೆಗ್ಗೆರೆ ಗ್ರಾಮದ ಕೆಲವರು ಲಾರಿಯನ್ನು ಗ್ರಾಮದೊಳಗೆ ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ ಆಗ ಪೊಲೀಸರು ಬಂದು ಗ್ರಾಮಸ್ಥರ ಮನವೊಲಿಸಿ ಲಾರಿ ಕಳಿಸಿದರು ಎನ್ನುವ ಮಾಹಿತಿ ಸ್ಥಳೀಯರು ನೀಡಿದ್ದಾರೆ.ಕರಿ ಕಲ್ಲು ಸಾಗಣೆ ನಿಯಂತ್ರಣಕ್ಕೆ ಸ್ಥಳೀಯರ ಒತ್ತಾಯ: ಇಲ್ಲಿನ ಕರಿಕಲ್ಲು ಬಹಳ ಮೃದುವಾಗಿದ್ದು. ವಿಗ್ರಹಗಳ ಕೆತ್ತನೆ ಸೇರಿದಂತೆ ಕಪ್ಪು ಬಣ್ಣದ ಗ್ರಾನೈಟ್ ಸ್ಲಾಬ್ ಮಾಡಲು ಬಹಳ ಉಪಯುಕ್ತವಾಗಿದೆ. ಈ ಹಿನ್ನಲೆಯಲ್ಲಿ ಗ್ರಾನೈಟ್ ಉದ್ದಿಮೆದಾರರು ರಾತ್ರೋರಾತ್ರಿ ಕಲ್ಲುಗಳನ್ನು ಸಾಗಿಸುತ್ತಾರೆ. ಕೋಟ್ಯಾಂತರ ಬೆಲೆ ಬಾಳುವ ಕಲ್ಲು ಕಳ್ಳರ ಪಾಲಾಗುತ್ತಿದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಧಿಕಾರಿಗಳು ಈ ಪ್ರದೇಶವನ್ನು ಸಂರಕ್ಷಣೆ ಮಾಡಿ ಕಲ್ಲು ಸಾಗಣೆ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.